ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು: ಸಿ.ಎಂ.ಸಿದ್ದರಾಮಯ್ಯ
- by Suddi Team
- June 2, 2025
- 51 Views
ಬೆಂಗಳೂರು:ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಆಯೋಜಿಸಿದ್ದ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರ ಸರ್ಕಾರಿ ಅಭಿನಂದನಾ ಕಾರ್ಯಕ್ರಮದಲ್ಲಿ ಬಾನು ಅವರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದರು.
ಬಾನು ಮುಷ್ತಾಕ್ ಅವರು ನಮ್ಮ ಭಾಷೆಗೆ ಬುಕರ್ ಒದಗಿಸಿಕೊಡುವ ಮೂಲಕ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ಜಗತ್ತಿನ ಹೆಮ್ಮೆ ಎಂದು ಮೆಚ್ಚುಗೆ ಸೂಚಿಸಿದರು. ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್ , ದೀಪಾ ಬಾಸ್ತಿ ಅವರಿಗೆ ತಲಾ 10 ಲಕ್ಷ ಪುರಸ್ಕಾರ ನೀಡಲಾಗುವುದು ಎಂದು ಘೋಷಿಸಿದರು.
ಬಾನು ಅವರ ಕತೆಗಳನ್ನು ಇಂಗ್ಲಿಷ್ ಗೆ ಪ್ರಕಟಿಸಲು, ಅನುವಾದಕ್ಕೆ ಸರ್ಕಾರದ ನೆರವು ನೀಡಲಾಗುವುದು ಎಂದು ತಿಳಿಸಿದರು. ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ ಎಂದು ವಿಶ್ಲೇಷಿಸಿದರು. ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷಿ ಎಂದರು.
ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಧ್ವನಿಯಾಗಿ ಮೌಡ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿ ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ.ಕವಿರಾಜಮಾರ್ಗದಲ್ಲಿ ಪರಧರ್ಮ ಮತ್ತು ಪರ ವಿಚಾರಗಳನ್ನು ಸಹಾನುಭೂತಿಯಿಂದ ನೋಡುಬೇಕು ಎಂದು ಕರೆ ನೀಡಿದ್ದರೆ, ಆದಿಕವಿ ಪಂಪ ಅವರು ಮನುಷ್ಯ ಜಾತಿ ತಾನೊಂದೇ ವಲಂ ಎಂದಿದ್ದಾರೆ, ಬಸವಣ್ಣನವರು “ಇವ ನಮ್ಮವ” ಎಂದು ಹೇಳಿದ್ದಾರೆ. ಹೆಣ್ಣಿನ ಧ್ವನಿಯಾದ ಅಕ್ಕಮಹಾದೇವಿ ಅವರೂ ಇದನ್ನೇ ಧ್ವನಿಸಿದ್ದಾರೆ. ಇವರೆಲ್ಲರ ಆಶಯಗಳ ಮುಂದುವರಿಕೆಯಾಗಿ ಬಾನು ಮುಷ್ತಾಕ್ ಕೆಲಸ ಮಾಡಿದ್ದಾರೆ ಎಂದರು.
Related Articles
Thank you for your comment. It is awaiting moderation.


Comments (0)