ಶಾಲೆಗಳ ಸಹಯೋಗದಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್ ಗಳ ರಚನೆ: ಡಿಸಿಎಂ
- by Suddi Team
- June 2, 2025
- 53 Views
 
                                                          ಬೆಂಗಳೂರು:”ಮಕ್ಕಳಲ್ಲಿ ಎಳೆ ವಯಸ್ಸಿನಲ್ಲಿ ಪರಿಸರ, ಹಸಿರು ಇಂಧನ, ಸ್ವಚ್ಛತೆ, ನೀರಿನ ಸಂರಕ್ಷಣೆ, ಗುಣಮಟ್ಟದ ಗಾಳಿ ಬಗ್ಗೆ ಅರಿವು ಮೂಡಿಸಲು ಜಿಬಿಎ ವ್ಯಾಪ್ತಿಯ ಶಾಲೆಗಳ ಸಹಯೋಗದಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್ ರಚನೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ಕ್ರಮ ಕೈಗೊಳ್ಳಲಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,”ಜೂನ್ 5ರಂದು ವಿಶ್ವ ಪರಿಸರ ದಿನ ಹಿನ್ನೆಲೆಯಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ (climate action plan) ಕ್ಲಬ್ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಓರ್ವ ಶಿಕ್ಷಕರು ಹಾಗೂ ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಕ್ಲಬ್ ರಚಿಸಲಾಗುವುದು. ಇವರಿಗೆ ಅಗತ್ಯವಾದ ಪ್ರಮಾಣಪತ್ರ, ಬ್ಯಾಡ್ಜ್ ಗಳನ್ನು ನಾವು ನೀಡುತ್ತೇವೆ” ಎಂದು ತಿಳಿಸಿದರು.
“ದೇಶದಲ್ಲಿ ಮುಂಬೈ, ಚೆನ್ನೈ ಹಾಗೂ ಬೆಂಗಳೂರು ಮೂರು ನಗರಗಳು ಹವಾಮಾನ ಕಾರ್ಯ ಯೋಜನೆಯಲ್ಲಿ ತೊಡಗಿಸಿಕೊಂಡಿವೆ. ಇದರ ಭಾಗವಾಗಿ ನಾವು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಜಿಬಿಎ ವ್ಯಾಪ್ತಿಯಲ್ಲಿ 6 ಸಾವಿರ ಶಾಲೆಗಳಿದ್ದು, ಇದರಲ್ಲಿ 4500 ಖಾಸಗಿ ಹಾಗೂ 1500 ಸರ್ಕಾರಿ ಶಾಲೆಗಳಿವೆ. ಈ ಎಲ್ಲಾ ಶಾಲೆಗಳು ಈ ಯೋಜನೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ. ಇದಕ್ಕೆ ಈಗಾಗಲೇ 650 ಶಾಲೆಗಳು ಹಾಗೂ ಪಿಯು ಕಾಲೇಜುಗಳು ಒಪ್ಪಿಗೆ ನೀಡಿವೆ. ಈಗಾಗಲೇ 18 ಕ್ಲಬ್ ಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ” ಎಂದು ತಿಳಿಸಿದರು.
“ಈ ಕ್ಲಬ್ ಗಳನ್ನು ರಚಿಸಲು ಸಾರ್ವಜನಿಕ ಸಂಘ ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು. ಇವುಗಳ ನೋಂದಣಿಗೆ 6ರಂದು ವೆಬ್ ಸೈಟ್ ಅನಾವರಣಗೊಳಿಸಲಾಗುವುದು” ಎಂದರು.
“ಇದರಲ್ಲಿ ಭಾಗವಹಿಸುವವರಿಗೆ ಬ್ಲೂ, ಗ್ರೀನ್ ಅವಾರ್ಡ್ ಗಳನ್ನು ನೀಡಲಾಗುವುದು. ಈ ಕ್ಲಬ್ ಗಳು ಹಸಿರು ಇಂಧನ, ಘನ ತ್ಯಾಜ್ಯ ನಿರ್ವಹಣೆ, ಗಾಳಿ ಗುಣಮಟ್ಟ, ತ್ಯಾಜ್ಯ ನೀರು, ಮಳೆನೀರು, ನಗರ ಯೋಜನೆ, ವಿಪತ್ತು ನಿರ್ವಹಣೆ ವಿಚಾರಗಳು ಒಳಗೊಂಡಿರುತ್ತದೆ. ಈ ವಿಚಾರಗಳ ಮೇಲೆ ಪ್ರಶಸ್ತಿಯನ್ನು ನೀಡಲಾಗುವುದು. 175 ಮಂದಿ, ಸಂಘ ಸಂಸ್ಥೆಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಈ ಪ್ರಶಸ್ತಿ ಆಯ್ಕೆಗೆ 15 ತೀರ್ಪುಗಾರರ ತಂಡವನ್ನು ನೇಮಿಸಲಾಗಿದೆ” ಎಂದರು.
ಈ ಕ್ಲಬ್ ಗಳ ಕಾರ್ಯಚಟುವಟಿಕೆ ಮೇಲ್ವಿಚಾರಣೆ ಮಾಡಲಾಗುವುದೇ ಎಂದು ಕೇಳಿದಾಗ, “ಇದರ ಮೇಲ್ವಿಚಾರಣೆಗೆ ಅಧಿಕಾರಿಗಳ ತಂಡ ನೇಮಿಸಲಾಗಿದೆ. ವಿಶೇಷ ಆಯುಕ್ತರು ಇದರ ಭಾಗವಾಗಿರುತ್ತಾರೆ. ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರ ತಂಡ ಕೂಡ ಇದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ನೂರಾರು ಶಾಲೆಗಳನ್ನು ನೋಂದಣಿ ಮಾಡಲಾಗಿದೆ” ಎಂದು ತಿಳಿಸಿದರು.
“ಜೂನ್ 6ರಂದು ಸಂಜೆ ನೆಹರೂ ತಾರಾಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ವಸ್ತು ಪ್ರದರ್ಶನವನ್ನು ನಾವು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕ್ಲಬ್ ಮೂಲಕ ರಸಪ್ರಶ್ನೆ, ಚರ್ಚಾ ಸ್ಪರ್ಧೆ ಆಯೋಜಿಸಿ, ಮಕ್ಕಳಲ್ಲಿ ಈ ವಿಚಾರವಾಗಿ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.
“ನಾವು ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಸಾರಿಗೆ ಇಲಾಖೆಯಲ್ಲಿ ಸಾವಿರಾರು ಬಸ್ ಖರೀದಿ ಮಾಡಲಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ನೀಡಲಾಗುತ್ತಿವೆ. ನಾನು ಬೆಂಗಳೂರು ಸಚಿವನಾದ ಬಳಿಕ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಶಾಲೆಗಳ ಸಹಯೋಗದಲ್ಲಿ ಮಕ್ಕಳ ಕೈಯಲ್ಲಿ ಮರ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
ವಾಹನಗಳ ಹೊಗೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ ಎಂದು ಕೇಳಿದಾಗ, “ಇದಕ್ಕಾಗಿ ನಾವು ಸಾರಿಗೆ ಇಲಾಖೆ ಒಳಪಡಿಸಿಕೊಂಡಿದ್ದೇವೆ. ಮೊದಲು ಸಾರಿಗೆ ಇಲಾಖೆ ಬಸ್ ಗಳ ಸಮಸ್ಯೆ ಬಗೆಹರಿಸಲಿದ್ದೇವೆ. ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಕಸ ವಿಲೇವಾರಿಗೆ ಕಾರ್ಯಕ್ರಮ:
“ಜೂನ್ 6ರಂದು ಸ್ವಚ್ಛ ಬೆಂಗಳೂರು ಯೋಜನೆ ಹಾಗೂ ಕಾರ್ಯಯೋಜನೆ ಘೋಷಣೆ ಮಾಡಲಾಗುವುದು. ಬೆಂಗಳೂರಿನಲ್ಲಿರುವ ಕಸವನ್ನು ಒಂದು ಬಾರಿಗೆ ತೆಗೆಯಬೇಕು ಎಂದು ತೀರ್ಮಾನಿಸಲಾಗಿದೆ. ಕಸವಿರುವ ಜಾಗದ ಬಗ್ಗೆ ಸಾರ್ವಜನಿಕರು ಜಿಬಿಎ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಈ ಮಾಹಿತಿ ಬಂದ ನಂತರ ಅಧಿಕಾರಿಗಳು ಕಸ ವಿಲೇವಾರಿ ಮಾಡಲಿದ್ದಾರೆ” ಎಂದರು.
ಕಸದ ಸಮಸ್ಯೆ ಹೆಚ್ಚಾಗಿದ್ದು, ಮಾರ್ಷಲ್ ಗಳು ಏನು ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಮಾರ್ಷಲ್ ಗಳು ಅವರ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 1.50 ಕೋಟಿ ಜನಸಂಖ್ಯೆ ಇದೆ. ಇಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ. ಅವರಲ್ಲಿ ಜಾಗೃತಿ ಮೂಡಿಸಬೇಕು. ಕಸ ಎಸೆದರೆ ವಿಧಿಸುವ ದಂಡ ಏರಿಕೆ ಮಾಡಲು ಚಿಂತಿಸುತ್ತಿದ್ದೇವೆ. ಖಾಲಿ ನಿವೇಶನಗಳ ಮಾಲೀಕರಿಗೆ ತಮ್ಮ ನಿವೇಶನ ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಲಾಗುವುದು. ನಗರದಲ್ಲಿ ನಿತ್ಯ 6 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ” ಎಂದು ತಿಳಿಸಿದರು.
“ಇನ್ನು ರಸ್ತೆ ಬದಿಯಲ್ಲಿ ಕಸ ತಂದು ಸುರಿಯುವುದನ್ನು ತಪ್ಪಿಸಲು ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಇನ್ನು ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಂಡಿದ್ದೇವೆ” ಎಂದು ಮಾಹಿತಿ ನೀಡಿದರು.
“2023-24ನೇ ಸಾಲಿನಲ್ಲಿ 19 ಹೊಸ ಪಾರ್ಕ್ ಅಭಿವೃದ್ಧಿ ಮಾಡಿ, 47 ಪಾರ್ಕ್ ಗಳನ್ನು ಮೇಲ್ದರ್ಜೆಗೆ ಏರಿಸಿದ್ದೇವೆ. 19 ಕೆರೆಗಳ ಅಭಿವೃದ್ಧಿ ಮಾಡಿ, 40 ಕೆರೆಗಳಿಗೆ ಬೇಲಿ ಹಾಕಲಾಗಿದೆ. ಇದಕ್ಕಾಗಿ 34.50 ಕೋಟಿ ವೆಚ್ಚ ಮಾಡಲಾಗಿದೆ. ಕೆರೆಗಳ ಅಭಿವೃದ್ಧಿಗೆ 55 ಕೋಟಿ ವೆಚ್ಚ ಮಾಡುತ್ತಿದ್ದು, ಜುಲೈ ವೇಳೆಗೆ 4 ಕೆರೆಗಳ ಅಭಿವೃದ್ಧಿ ಪೂರ್ಣಗೊಳ್ಳಲಿದೆ. 2025-26ನೇ ಸಾಲಿನಲ್ಲಿ ಉದ್ಯಾನವನಗಳ ಮೇಲ್ದರ್ಜೆಗೆ ಏರಿಸಲು 80 ಕೋಟಿ ಹಣ ಮೀಸಲಿಡಲಾಗಿದೆ. ಕೆರೆಗಳ ಅಭಿವೃದ್ಧಿಗೆ 250 ಕೋಟಿ ಮೀಸಲಿಡಲಾಗಿದೆ” ಎಂದರು.
“ನ್ಯಾಯಾಲಯದ ನಿರ್ದೇಶನ ಮೇರೆಗೆ ನಗರದಲ್ಲಿ ಮರಗಣತಿ ಮಾಡಲು ತೀರ್ಮಾನಿಸಿದ್ದು, ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ಪ್ರಾಯೋಗಿಕ ಯೋಜನೆ ಮಾಡಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದೊಂದು ವಾರ್ಡಿಗೆ 1 ಕೋಟಿ ಮೀಸಲಿಟ್ಟು ಬೆಂಗಳೂರು ಗ್ರೀನ್ ವಾರ್ಡ್ ಆಗಿ ಮಾಡಲಾಗುವುದು” ಎಂದು ತಿಳಿಸಿದರು.
ಜಿಬಿಎ ಬೌಂಡರಿ ನಿಗದಿ ಯಾವಾಗ ಎಂದು ಕೇಳಿದಾಗ, “ಈಗ ಇರುವ ವ್ಯಾಪ್ತಿಯನ್ನೇ ಮಾಡಲು ಅಧಿಸೂಚನೆ ಹೊರಡಿಸಿದ್ದೇವೆ. ಇದು ಅಂತಿಮವಾಗಿದೆ. ಈ ವಿಚಾರವಾಗಿ ಸಚಿವರು ಹಾಗೂ ಸರ್ವಪಕ್ಷ ಶಾಸಕರು ಅನೇಕ ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಕೆಲವರ ಬಗ್ಗೆ ಮಾತನಾಡಬೇಕಿದ್ದು, ಎರಡು ಮೂರು ದಿನಗಳಲ್ಲಿ ಎಷ್ಟು ಪಾಲಿಕೆ ಮಾಡಬೇಕು ಎಂದು ತೀರ್ಮಾನಿಸಿ, ಇದಕ್ಕೆ ಅಂತಿಮ ರೂಪನೀಡಬೇಕು. ಈ ಪಾಲಿಕೆಗಳ ಚುನಾವಣೆ ನಡೆಸಬೇಕು. ನಂತರ ಯಾವ ಯಾವ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಗುವುದು” ಎಂದು ತಿಳಿಸಿದರು.
Related Articles
                            Thank you for your comment. It is awaiting moderation.
                        
                                        
                    
                    
                 
                            
                                            
 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                    
Comments (0)