ತಮನ್ನಾರನ್ನ ರಾಯಭಾರಿ ಮಾಡಿದ್ದು ಮಹಾರಾಜರಿಗೆ ಮಾಡುವ ಅವಮಾನ: ವಿಜಯೇಂದ್ರ

ಬೆಂಗಳೂರು: ಪರಿಣಿತರ ಸಲಹೆ ಪಡೆದುಕೊಂಡೇ ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದಾರಂತೆ, ಇದಕ್ಯಾಕ್ರೀ ಬೇಕು ಪರಿಣಿತರ ಸಲಹೆ? ಸರ್ಕಾರದ ಈ ನಡೆ ಮಹಾರಾಜರಿಗೆ ಮಾಡುವ ಅವಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಂಡ್ ಅಂಬಾಸಿಡರ್ ಆಗಿ ಕರ್ನಾಟಕದವರು ಸಿಗಲಿಲ್ಲವೇ?ಕೆಎಸ್‍ಡಿಎಲ್‍ನ ಮೈಸೂರು ಸ್ಯಾಂಡಲ್ ಸಾಬೂನಿಗೆ 6.20 ಕೋಟಿ ಕೊಟ್ಟು ನಟಿ ತಮನ್ನಾ ಭಾಟಿಯರನ್ನು ರಾಯಭಾರಿಯಾಗಿ ತರಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇದು ಗಂಭೀರ ವಿಚಾರ. ನಾಡಿನ ನೆಲ, ಜಲ, ಭಾಷೆ, ಪರಂಪರೆಯನ್ನು ಉಳಿಸಿ ಬೆಳೆಸುವುದು ರಾಜ್ಯದ ಕರ್ತವ್ಯ. ಕೆಎಸ್‍ಡಿಎಲ್ ಸಂಸ್ಥೆಯನ್ನು ಕಾಂಗ್ರೆಸ್ ಸರಕಾರ ಹುಟ್ಟು ಹಾಕಿಲ್ಲ. 1916ರಲ್ಲಿ ಅಂದಿನ ಮಹಾರಾಜರ ದೂರದೃಷ್ಟಿ- ಕನಸಿನ ಕೂಸಿದು ಎಂದು ಗಮನ ಸೆಳೆದರು.

ಈ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿ ಕರ್ನಾಟಕದವರು ಯಾರೂ ಸಿಗಲಿಲ್ಲವೇ? ರಾಜ್ಯದಲ್ಲಿ ಅಂಥ ಉತ್ತಮ ನಟ, ನಟಿ, ಕನ್ನಡಿಗರು ಸಿಗಲೇ ಇಲ್ಲವೇ? ಎಂದು ಪ್ರಶ್ನಿಸಿದರು. ಪರಿಣಿತರ ಸಲಹೆ ಪಡೆದುಕೊಂಡರೆಂಬ ಸಚಿವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಇದಕ್ಯಾಕ್ರೀ ಬೇಕು ಪರಿಣಿತರ ಸಲಹೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯಾರು ಪರಿಣಿತರು, ಯಾವುದರಲ್ಲಿ ಪರಿಣಿತರು ಎಂದು ಕೇಳಿದರಲ್ಲದೆ, ರಾಜ್ಯ ಸರಕಾರ ಈ ವಿಷಯದಲ್ಲಿ ಸ್ವೇಚ್ಛಾಚಾರದಿಂದ ನಡೆದುಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದು ಮಹಾರಾಜರಿಗೆ ಮಾಡುವ ಅವಮಾನ ಎಂದು ಖಂಡಿಸಿದರು.

ಶಿವಕುಮಾರರಿಗೆ ರಾಮನಗರ ಹೆಸರಿನ ಕುರಿತು ಕೀಳರಿಮೆಯೇ?

ರಾಮನಗರ ಜಿಲ್ಲೆಯ ಹೆಸರು ಬದಲಿಸುವ ವಿಚಾರದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳು ಎನ್ನುವುದನ್ನೂ ಮರೆತ ಡಿ.ಕೆ.ಶಿವಕುಮಾರ್ ಅವರು, ರಿಯಲ್ ಎಸ್ಟೇಟ್ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ ಎಂದು ರಾಮನಗರ ಜಿಲ್ಲೆಯವರೂ, ರಾಜ್ಯದ ಜನತೆಯೂ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರಿಗೆ ರಾಮನಗರ ಹೆಸರಿನ ಕುರಿತು ಕೀಳರಿಮೆ ಇದೆಯೇ? ಅಥವಾ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಹೆಸರು ಸೇರಿಸದೇ ಇದ್ದಲ್ಲಿ ಅಭಿವೃದ್ಧಿಯೇ ಆಗಲಾರದೇ? ಎಂದು ಪ್ರಶ್ನಿಸಿದರು. ಇತಿಹಾಸ ಇರುವ ರಾಮನಗರ ಜಿಲ್ಲೆಯ ಹೆಸರು ಬದಲಿಸುತ್ತಾರೆ ಎಂದರೆ ಆ ಜಿಲ್ಲೆಯ ಜನರಿಗೆ ಮಾಡುವ ಅವಮಾನ ಎಂದು ಆಕ್ಷೇಪಿಸಿದರು. ರಿಯಲ್ ಎಸ್ಟೇಟ್ ಎಂದರೆ ಮಾತ್ರ ಅಭಿವೃದ್ಧಿಯೇ? ರಾಜ್ಯ ಸರಕಾರ ಇರುವುದೇ ರಿಯಲ್ ಎಸ್ಟೇಟ್ ಮಾಡಲೆಂದೇ ಎಂದು ವಾಗ್ದಾಳಿ ನಡೆಸಿದರು.

ಹೆದ್ದಾರಿಗೆ ಭೂಸ್ವಾಧೀನ ವಿಷಯದಲ್ಲಿ ನಿರಾಸಕ್ತಿ:

ಹೆದ್ದಾರಿಗಳ ಅಭಿವೃದ್ಧಿ ಎಂಬುದು ಪ್ರಧಾನಿಯವರ ಕನಸಿನ ಕೂಸು. ಅದು ರಾಜ್ಯದ ಅಭಿವೃದ್ಧಿಗೂ ಪೂರಕ ಎಂಬ ಚಿಂತನೆ ಅವರದು. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ವಿಷಯದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವು ಹಿಂದುಳಿದಿದೆ. ರಾಜ್ಯ ಸರಕಾರವು ಭೂಸ್ವಾಧೀನದ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿ ವೇಗದಿಂದ ಸಾಗುತ್ತಿಲ್ಲ ಎಂದರು.

ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಕಾಡುತ್ತಿದೆ. ವಿಧಾನಸೌಧವನ್ನು ಪ್ರವಾಸಿಗರು ದುಡ್ಡುಕೊಟ್ಟು ನೋಡುವಂಥ ತೀರ್ಮಾನವನ್ನೂ ರಾಜ್ಯ ಸರಕಾರ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಅಭಿವೃದ್ಧಿಗೆ ಬೇಕಾದ ಹಣಕಾಸನ್ನು ಹೊಂದಿಸಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ; ಬೆಂಗಳೂರು ನಗರದಲ್ಲಿ ಕಸಕ್ಕೂ ತೆರಿಗೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳು ಸತ್ಯವನ್ನು ಮರೆಮಾಚುತ್ತಿದ್ದಾರೆ. ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಹಣ ನೀಡುತ್ತಿಲ್ಲ ಎಂದು ಟೀಕಿಸಿದರು.

ಅಭಿವೃದ್ಧಿ ಅನುದಾನದ ಚರ್ಚೆಗೆ ಬರಲು ಸವಾಲು..

ಕಾಂಗ್ರೆಸ್ ಸರಕಾರ- ಸಿದ್ದರಾಮಯ್ಯರನ್ನು ಖುಷಿ ಪಡಿಸಲು ನಾವು ಚಾರ್ಜ್‍ಶೀಟ್ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಮೈಸೂರಿನ ಅಭಿವೃದ್ಧಿಗೆ ನಾವೆಷ್ಟು ಸಾವಿರ ಕೋಟಿ ಅನುದಾನ ಕೊಟ್ಟಿದ್ದೇವೆ? ನೀವೆಷ್ಟು ಕೊಟ್ಟಿದ್ದೀರೆಂದು ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.

Related Articles

Comments (0)

Leave a Comment