ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

ವಿಜಯನಗರ:ರಾಜ್ಯ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಪಕ್ಷದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಇರಲಿವೆ ಎನ್ನುವ ಮೂಲಕ ಬಿಜೆಪಿ ಟೀಕೆಗೆ ತಿರುಗೇಟು ಜತೆಗೆ ಮುಂದೆ ಗ್ಯಾರಂಟಿ ಯೋಜನೆಗಳು ಬೇಕಾದರೆ ಕಾಂಗ್ರೆಸ್ ಗೇ ಅಧಿಕಾರ ನೀಡಿ ಎನ್ನುವ ಪರೋಕ್ಷ ಸಂದೇಶವನ್ನು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಂಗಳವಾರ ನಡೆದ ಪ್ರಗತಿಯತ್ತ ಕರ್ನಾಟಕ ಸಮರ್ಪಣೆಯ ಸಂಕಲ್ಪ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.“ನಾವಿಂದು ಎರಡು ವರ್ಷಗಳ ಸಂಭ್ರಮಾಚರಣೆ ಮಾಡಲು ಇಲ್ಲಿಗೆ ಬಂದಿಲ್ಲ. ಕರ್ನಾಟಕ ರಾಜ್ಯದ ಜನರ ಋಣ ತೀರಿಸಲು ಸಮರ್ಪಣೆಯ ಸಂಕಲ್ಪ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 136 ಕ್ಷೇತ್ರಗಳಲ್ಲಿ ಶಾಸಕರನ್ನು ಆಯ್ಕೆ ಮಾಡಿ ನಮಗೆ ಆಶೀರ್ವಾದ ಮಾಡಿದಿರಿ. ನಿಮ್ಮ ಋಣ ತೀರಿಸಲು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡುವ ಮೂಲಕ ನಮ್ಮ ಸರ್ಕಾರ ಇತಿಹಾಸ ಬರೆಯುತ್ತಿದೆ” ಎಂದು ತಿಳಿಸಿದರು.

ನಮ್ಮ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವವರೆಗೂ ಈ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಇದರಲ್ಲಿ ಯಾವುದೇ ಅನುಮಾನ ಬೇಡ ಎನ್ನುವ ಮೂಲಕ ಗ್ಯಾರಂಟಿಗಳು ಬೇಕಾದಲ್ಲಿ ಮತ್ತೊಮ್ಮೆ ಚುನಟವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಅಧಿಕಾರಕ್ಕೆ ತನ್ನಿ ಎನ್ನುವ ಸಂದೇಶವನ್ನು ಸಾರಿದರು.

“ಗ್ರಾಮೀಣ ಪ್ರದೇಶದ ಬಡ ಜನರು, ಕಳೆದ ಐವತ್ತು ವರ್ಷಗಳಿಂದ ಪಟ್ಟಾ ಖಾತೆ ಇಲ್ಲದವರಿಗೆ ಇಂದು ಈ ಯೋಜನೆ ಮೂಲಕ ದಾಖಲಾತಿ ನೀಡುತ್ತಿದ್ದೇವೆ. ಇಂತಹ ಐತಿಹಾಸಿಕ ಯೋಜನೆ ನೀಡಿರುವ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಅವರ ಅಧಿಕಾರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಗರ ಪ್ರದೇಶಗಳಲ್ಲಿ ನಾನು, ಭೈರತಿ ಸುರೇಶ್, ರಹೀಂ ಖಾನ್ ಅವರು ಸೇರಿ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ಖಾತೆಗಳನ್ನು ಸರಿಪಡಿಸಿ ಜನರಿಗೆ ನೀಡುವ ಏಳನೇ ಗ್ಯಾರಂಟಿಯನ್ನು ಘೋಷಣೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ” ಎಂದು ಹೇಳಿದರು.

“ನಮ್ಮ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಬೇಡಿ ಹಾಕಿದೆ. ಇಂದಿರಾ ಗಾಂಧಿ ಅವರು ಈ ಜಿಲ್ಲೆಯಲ್ಲಿ ವಿಜಯನಗರ ಸ್ಟೀಲ್ ಆರಂಭಿಸಿದರು. ಸೋನಿಯಾ ಗಾಂಧಿ ಅವರು ಇಲ್ಲಿ ಬಂದು ವಿದ್ಯುತ್ ಶಕ್ತಿಯ ಆರ್ ಟಿಪಿಎಸ್ ಆರಂಭಿಸಿದರು. ರಾಹುಲ್ ಗಾಂಧಿ ಅವರು ನಮ್ಮ ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡಿದ ಬಹುತೇಕ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಗೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಂಸದರನ್ನು ಆಯ್ಕೆ ಮಾಡಿದ್ದೀರಿ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವರ್ಷಕ್ಕೆ 5 ಸಾವಿರ ಕೋಟಿ ನೀಡುತ್ತಿದ್ದೇವೆ” ಎಂದರು.

“ವಿರೋಧ ಪಕ್ಷಗಳು ನಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅದಕ್ಕೆ ನಮ್ಮ ಯೋಜನೆಗಳೇ ಸಾಕ್ಷಿ. ರೈತರ ಬವಣೆ ನೀಗಿಸಲು ರಾಜ್ಯದ ಕೆರೆಗಳನ್ನು ತುಂಬಿಸಲು ಕಾರ್ಯಕ್ರಮ ರೂಪಿಸಲಾಗಿದೆ. ನವಲಿ ಅಣೆಕಟ್ಟು ಯೋಜನೆ ಮಾಡಲು ಚರ್ಚೆ ಮಾಡುತ್ತಿರುವ ಹೊತ್ತಿನಲ್ಲಿಯೇ. ನಮ್ಮ ಪಾಲಿನ 24 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಕೆರೆಗಳಿಗೆ ತುಂಬಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಈ ವಿಚಾರವಾಗಿ ಆಂಧ್ರ ಪ್ರದೇಶ ರಾಜ್ಯದ ಜತೆ ಚರ್ಚೆ ಮಾಡಬೇಕಿದೆ. ಈ ಯೋಜನೆ ಮೂಲಕ ನಿಮ್ಮ ರಕ್ಷಣೆ ಮಾಡಲು ನಾವು ಬದ್ಧ” ಎಂದು ಭರವಸೆ ನೀಡಿದರು.

“ನಮ್ಮ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದಾಗಿದ್ದಾರೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಕಲ್ಯಾಣ ಪಥ ಯೋಜನೆ ರೂಪಿಸಲಾಗಿದೆ. ಇದರ ಜತೆಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ನಮ್ಮ ಸಚಿವರು ಹೊಸ ಯೋಜನೆ ತಂದು ಜನರ ಸೇವೆ ಮಾಡುತ್ತಿದ್ದಾರೆ” ಎಂದರು.

“ನಮ್ಮ ಸರ್ಕಾರ ಬಸವಣ್ಣನವರ ಮಾರ್ಗದರ್ಶನದಂತೆ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರದ ಕಾರ್ಯ ಸಾಧನೆಯನ್ನು ವಿರೋಧ ಪಕ್ಷಗಳು ಕಣ್ಣಲ್ಲಿ ನೋಡಲಾಗದೇ, ಟೀಕೆ ಮಾಡುತ್ತಿದ್ದಾರೆ. ಅವರು ಟೀಕೆ ಮಾಡುತ್ತಿರಲಿ, ನಾವು ಜನರ ಬದುಕು ಉಳಿಸುವ ಕೆಲಸ ಮಾಡಿಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.

Related Articles

Comments (0)

Leave a Comment