ರೈತರ ಸಾಲ ಮನ್ನಾಕ್ಕೆ ನೆರವು ನೀಡಿ: ಕೇಂದ್ರಕ್ಕೆ ಸಿಎಂ ಮನವಿ
- by Suddi Team
 - June 17, 2018
 - 110 Views
 
ನವದೆಹಲಿ: ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೃಷಿ ಬಿಕ್ಕಟ್ಟು ಕೂಡ ಒಂದಾಗಿದ್ದು, ರೈತರ ಸಾಲ ಮನ್ನಾದ ಕುರಿತು ರಾಜ್ಯದ ಜನರು ಎದುರು ನೋಡುತ್ತಿದ್ದಾರೆ. ಆದ್ದರಿಂದ, ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಿದ್ದಾರೆ. ಸಭೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಭೆಯಲ್ಲಿ ರಾಜ್ಯದ ಕೆಲವು ಆದ್ಯತೆಗಳ ಕುರಿತು ವಿಷಯ ಮಂಡನೆ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜಕೀಯವಾಗಿ ಬೇರೆ ಬೇರೆ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಿದ್ದರೂ ದೇಶದ ಅಭಿವೃದ್ಧಿಯ ವಿಷಯಕ್ಕೆ ಕೈಜೋಡಿಸಬೇಕಿದೆ. ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಬರ, ಬೆಳೆಹಾನಿಯಂತಹ ಅನೇಕ ಸಮಸ್ಯೆಯಿಂದಾಗಿ ಕರ್ನಾಟಕದ 85 ಲಕ್ಷ ರೈತರು ಬ್ಯಾಂಕ್ಗಳಲ್ಲಿ ಸಾಲ ಹೊಂದಿದ್ದಾರೆ. ಈ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದ್ದು ಇದಕ್ಕೆ ಶೇ 50ರಷ್ಟು ಬೆಂಬಲವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ರಾಷ್ಟ್ರೀಯ ಸ್ವಾಸ್ಥ್ಯ ಸುರಕ್ಷಾ ಮಿಷನ್ ಅನ್ನು ನಾವು ಸ್ವಾಗತಿಸುತ್ತೇವೆ. ಇದೇ ರೀತಿಯಲ್ಲಿ ರಾಜ್ಯ ಸರ್ಕಾರ ಯಶಸ್ವಿನಿ ಸೇರಿದಂತೆ ಹಲವು ವಿಭಾಗದ ಜನರಿಗೆ ಕಳೆದ 15 ವರ್ಷಗಳಿಂದ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಇದು 30 ಲಕ್ಷ ಎಪಿಲ್ ಕುಟುಂಬ ಸೇರಿದಂತೆ 145 ಲಕ್ಷ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಇದು ಕೇಂದ್ರದ ಯೋಜನೆಗಿಂತ ದೊಡ್ಡದಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಮತದಿಂದ ಈ ಎರಡೂ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ತಿಳಿಸಿದರು.
ಹಿಂದುಳಿದ ಯಾದಗಿರಿ, ರಾಯಚೂರು ಜಿಲ್ಲೆಗಳ ಅಭಿವೃದ್ಧಿಗೆ ನಾವು ಕ್ರಮ ಕೈಗೊಳ್ಳಬೇಕಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ವರ್ಷಕ್ಕೆ 100 ಕೋಟಿ ರೂ.ನಂತೆ ಐದು ವರ್ಷ ಹಣ ನೀಡಬೇಕು ಎಂದರು. ಇನ್ನು ಯುವಜನತೆಗೆ ಉದ್ಯೋಗ ಕಲ್ಪಿಸಲು ಕೌಶಲ್ಯ ರೂಪಿಸಿದರೆ ಸಾಲದು ಅದಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿ ಕೂಡ ಮಾಡಬೇಕು ಎಂದು ಸಲಹೆ ನೀಡಿದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            

                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)