ಹಣದುಬ್ಬರ ವಿಚಾರವನ್ನು ಕಾಂಗ್ರೆಸ್ ಸಂಸತ್ ಸದನದಲ್ಲಿ ಪ್ರಸ್ತಾಪಿಸಲಿದೆ:ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್
- by Suddi Team
- July 14, 2021
- 49 Views

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಸರ್ಕಾರ ಸರ್ಕಾರ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ.ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಹಣದುಬ್ಬರ ಜನಸಾಮಾನ್ಯರಿಗೆ ಹೊರೆಯಾಗಿದೆ.ಇಂಧನ ತೈಲ ಬೆಲೆ ಇಳಿಸಬೇಕು, ಆಮದು ಸುಂಕ ಹಾಗೂ ಜಿಎಸ್ಟಿ ಪ್ರಮಾಣ ಕಡಿಮೆ ಮಾಡಬೇಕು ಎಂದು ಸರಕಾರಕ್ಕೆ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶ್ರೀನೇಟ್
ಸರ್ಕಾರದ ದುರಾಸೆ ಹಾಗೂ ಶೋಷಣೆಯಿಂದ ಇಂಧನ ತೈಲ ಬೆಲೆ ಏರಿಕೆ ಹೆಚ್ಚುತ್ತಿದೆ.ಅತಿಯಾದ ಆಮದು ಸುಂಕದಿಂದ ತಾಳೆ ಎಣ್ಣೆ, ಬೇಳೆ ಕಾಲುಗಳ ಬೆಲೆ ಹೆಚ್ಚಾಗಿದೆ. ಟೂತ್ ಪೇಸ್ಟ್, ಸೋಪು, ಟೀ ಯಂತಹ ದಿನಬಳಕೆ ವಸ್ತುಗಳ ಮೇಲೆ ಅತಿಯಾದ ಜಿಎಸ್ಟಿಯಿಂದ ಜನ ಸಾಮಾನ್ಯ ಸಂಕಷ್ಟಕ್ಕೆ ಸಿಲುಕಿದ್ದಾನೆ ಹಣದುಬ್ಬರ ವಿಚಾರವನ್ನು ಕಾಂಗ್ರೆಸ್ ಸಂಸತ್ ಸದನದಲ್ಲಿ ಪ್ರಸ್ತಾಪಿಸಲಿದೆ ಎಂದ್ರು.

ಬೆಲೆ ಏರಿಕೆ ಗಾಯದ ಮೇಲೆ ಬರೆ:
ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಜನಸಾಮಾನ್ಯರು ತತ್ತರಿಸಿದ್ದು, ಈ ಮಧ್ಯೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಜನ ಭಯಾನಕ ವೈರಸ್ ಹಾಗೂ ಮೋದಿ ಸರ್ಕಾರದ ಆರ್ಥಿಕ ದುರಾಡಳಿತದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉದ್ಯೋಗ ನಷ್ಟ, ವೇತನ ಕಡಿತವಾಗಿದೆ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಣ ನೀಡಬೇಕಾದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಬೇಜವಾಬ್ದಾರಿ ತೋರುತ್ತಿದೆ ಎಂದರು.
ಬಡವಾದ ಭಾರತೀಯರು:
ಯುಪಿಎ ಸರ್ಕಾರದ ಉತ್ತಮ ಕೆಲಸದ ಮೂಲಕ ದೇಶದ 27 ಕೋಟಿ ಜನರನ್ನು ಬಡತನ ರೇಖೆಗಿಂತ ಹೊರಕ್ಕೆ ತಂದಿತ್ತು. ಆದರೆ ಬಿಜೆಪಿ ಸರ್ಕಾರದ ದುರಾಡಳಿತ ದೇಶದ 23 ಕೋಟಿ ಜನ ಬಡತನ ರೇಖೆಗಿಂತ ಕೆಳಕ್ಕೆ ದೂಡಿದೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಶೇ.97ರಷ್ಟು ಜನ ಕಡಿಮೆ ವೇತನ ಪಡೆಯುವಂತಾಗಿದೆ. ಪರಿಣಾಮ ಭಾರತೀಯರು ₹1.25 ಲಕ್ಷ ಕೋಟಿ ಕಾರ್ಮಿಕ ನಿಧಿ ಹಣ ಪಡೆಯುವಂತಾಗಿದೆ ಎಂದರು.
ಆರ್ಥಿಕ ನಿರ್ವಹಣೆ ವೈಫಲ್ಯ:
ದೇಶದ ಜಿಡಿಪಿ ಕುಸಿಯುತ್ತಿರುವಾಗ ಹಣದುಬ್ಬರ ಮಹಾಪರಾಧ. ಜನರ ಆದಾಯ ಕುಸಿಡಿರುವಾಗ ಅಗತ್ಯ ವಸ್ತುಗಳ ಮೇಲೆ ಹೆಚ್ಚು ವ್ಯಯಿಸುವಂತೆ ಮಾಡುವಂತಾಗಿದೆ. ಇದು ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ವಿಚಾರ ಮಾತ್ರವಲ್ಲ. ಅಡುಗೆ ಎಣ್ಣೆ, ಬೇಳೆ ಕಾಳುಗಳು, ಚಹಾ, ಕಾಫಿ, ಸೋಪುಗಳ ಬೆಲೆ ಕೂಡ ಹೆಚ್ಚಾಗಿವೆ.
ಇತ್ತೀಚಿನ ಹಣದುಬ್ಬರ ಸಂಖ್ಯೆ ಎಚ್ಚರಿಕೆ ಗಂಟೆಯಾಗಿದೆ. ಚಿಲ್ಲರೆ ಹಣದುಬ್ಬರವು ಆರ್ ಬಿ ಐನ ಗುರಿ ಶೇ.6ಕ್ಕಿಂತ ಹೆಚ್ಚಾಗಿದ್ದು, ಶೇ.6.3ರಷ್ಟು ತಲುಪಿದೆ. ಈ ಕೆಳಗಿನ ಪಟ್ಟಿಯಲ್ಲಿ ಹಣದುಬ್ಬರದ ಮಾಹಿತಿ ನೀಡಲಾಗಿದೆ.
ಗ್ರಾಹಕ ದರ ಸೂಚ್ಯಂಕ (CPI) ಹಣದುಬ್ಬರ: ಮೇ ನಲ್ಲಿ 5.91% ರಿಂದ ಜೂನ್ ಗೆ 6.37%ರಷ್ಟು ಹೆಚ್ಚಳ
ಮೂಲ ಹಣದುಬ್ಬರ (core inflation): 5.5% ರಿಂದ 5.8%ಕ್ಕೆ ಏರಿಕೆ
ಆಹಾರ ಹಣದುಬ್ಬರ: 5.58% ತಲುಪಿದೆ
ಬೇಳೆಗಳ ಹಣದುಬ್ಬರ: 10.01%
ರಷ್ಟಾಗಿದೆ
ಹಣ್ಣುಗಳ ಹಣದುಬ್ಬರ: 11.82%
ರಷ್ಟಾಗಿದೆ
ಸಾರಿಗೆ ಹಣದುಬ್ಬರ: 11.56% ರಷ್ಟಾಗಿದೆ
ಇಂಧನ ಹಣದುಬ್ಬರ: 12.68%ರಷ್ಟಾಗಿದೆ
ತೈಲ ಹಣದುಬ್ಬರ: 34.78%ರಷ್ಟಾಗಿದೆ.
ಇದೆಲ್ಲದರ ನಡುವೆ ಜನ ಸಾಮಾನ್ಯರು ತಿನ್ನುವುದಾದರೂ ಏನು? ಈ ಪರಿಸ್ಥಿತಿಯಲ್ಲಿ ವಿದ್ಯುತ್, ಇಂಧನದಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ್ರು.
ಲಾಭ ಮಾಡುತ್ತಿರುವ ಸರ್ಕಾರ:
ಮೋದಿ ಸರ್ಕಾರ ಜನರಿಗೆ ದ್ರೋಹ ಬಗೆದಿದೆ. ಅತಿಯಾದ ಹಣದುಬ್ಬರಕ್ಕೆ ಅತಿಯಾದ ಬೇಡಿಕೆ ಅಥವಾ ಜನರ ಕೈಯಲ್ಲಿ ಹೆಚ್ಚಿನ ಹಣವಿರುವ ಕಾರಣದಿಂದ ಉಂಟಾಗಿಲ್ಲ. ಬದಲಿಗೆ ಜನರ ಆದಾಯ ಕುಸಿದು ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ಈ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿರುವುದು ಸರ್ಕಾರದ ಶೋಷಣೆ, ದುರಾಸೆ ಹಾಗೂ ಆರ್ಥಿಕತೆ ನಿರ್ವಹಣೆಯಲ್ಲಿನ ವೈಫಲ್ಯ. ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರ ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಜನರಿಗೆ ನೀಡಲು ನಿರಾಕರಿಸಿದೆ. ಜನರಿಗೆ ಲಾಭ ನೀಡುವ ಬದಲು ತಾನೇ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಕಳೆದ 7 ವರ್ಷಗಳಲ್ಲಿ 13 ಬಾರಿ ಅಬಕಾರಿ ಸುಂಕ ಹೆಚ್ಚಿಸಿ ಸರ್ಕಾರ ₹23 ಲಕ್ಷ ಕೋಟಿ ಆದಾಯ ಮಾಡಿಕೊಂಡಿದೆ ಎಂದ್ರು.
ಹೊತ್ತಿ ಉರಿಯುತ್ತಿದೆ ತೈಲ ಬೆಲೆ:
ಇಂಧನಗಳ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಕ್ಕೆ ಭಾರತೀಯರು ಅತಿ ಹೆಚ್ಚು ಹಣ ಪಾವತಿಸುತ್ತಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ₹109 ಆಗಿದೆ. ಡೀಸೆಲ್ ₹90 ಕ್ಕೂ ಹೆಚ್ಚಾಗಿದೆ. ಅಡುಗೆ ಅನಿಲ ₹834 ಆಗಿದೆ. ಈ ಬೆಲೆ ಏರಿಕೆ ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಆಗಿಲ್ಲ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 5 ಅಮೆರಿಕನ್ ಡಾಲರ್ ಆಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇದರ ಬೆಲೆ 125 ಡಾಲರ್ ಆಗಿತ್ತು. ಆಗ ಪೆಟ್ರೋಲ್ ₹65 ಹಾಗೂ ಡೀಸೆಲ್ ₹44 ಇತ್ತು.
ಮೋದಿ ಸರ್ಕಾರ ಜನರ ಮೇಲೆ ಸುಂಕ ಹಾಕಿ ನಾಚಿಗೆ ಬಿಟ್ಟು ಲಾಭ ಮಾಡಿಕೊಳ್ಳುತ್ತಿದೆ. ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ₹33ರಷ್ಟು ಸುಂಕ ವಸೂಲಿ ಮಾಡುತ್ತಿದ್ದು, 2014ಕ್ಕಿಂತ 249%ರಷ್ಟು ಹೆಚ್ಚು ಸುಂಕ ಪಡೆಯುತ್ತಿದೆ. ಡೀಸೆಲ್ ಮೇಲೆ ₹32 ಸುಂಕ ಪಡೆಯುತ್ತಿದ್ದು, 7 ವರ್ಷಗಳಲ್ಲಿ 796%ರಷ್ಟು ಏರಿಕೆಯಾಗಿದೆ. ಇದರಿಂದ ಕೇಂದ್ರ ಸರ್ಕಾರ ಒಂದೇ ಆರ್ಥಿಕ ವರ್ಷದಲ್ಲಿ ₹3.89 ಲಕ್ಷ ಕೋಟಿ ಸುಂಕದ ರೂಪದಲ್ಲಿ ಸಂಗ್ರಹಿಸುತ್ತಿದೆ. ಇದರಿಂದಾಗಿ ದೇಶದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಗಿಂತ ತೈಲದ ಮೇಲಿನ ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ರು.
ಅಡುಗೆ ಅನಿಲ ದರ ಏರಿಕೆ:
ಅಡುಗೆ ಅನಿಲ ದರದಲ್ಲಿ ಕಳೆದ 6 ಬಾರಿ ಏರಿಕೆಯಿಂದ ₹ 240ರಷ್ಟು ಹೆಚ್ಚಾಗಿದೆ. ಕಳೆದ ನವೆಂಬರ್ ನಲ್ಲಿ ₹ 594 ರಷ್ಟಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ ₹834 ಆಗಿದೆ. ನಿರಂತರ ಬೆಲೆ ಏರಿಕೆಯಿಂದ ನಿಯಂತ್ರಿತ ಹಾಗೂ ಮಾರುಕಟ್ಟೆ ಬೆಲೆ ನಡುವೆ ವ್ಯತ್ಯಾಸವೇ ಇಲ್ಲದಂತಾಗಿ ಜನರಿಗೆ ಸಬ್ಸಿಡಿ ಸಿಗದಂತಾಗಿದೆ ಎಂದ್ರು.
ಅಗತ್ಯ ವಸ್ತುಗಳ ಬೆಲೆ ಏರಿಕೆ:
ಈ ಹಿಂದೆ ಹೇಳಿದಂತೆ ಕೇವಲ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಮಾತ್ರ ಜನರ ಜೇಬಿಗೆ ಹೊರೆಯಾಗಿಲ್ಲ. ಕಳೆದ ಮೂರು ತಿಂಗಳಲ್ಲಿ ಅಡುಗೆ ಎಣ್ಣೆ, ಬೇಳೆ, ಸೋಪು, ಟೀ, ಕಾಫಿಗಳ ಬೆಲೆ ಶೇ.42ರಷ್ಟು ಏರಿಕೆಯಾಗಿದೆ.
2021ರ ಮಾರ್ಚ್ ನಿಂದ ಏಪ್ರಿಲ್ ವರೆಗೆ…
ಅಡುಗೆ ಎಣ್ಣೆ 12-42%
ಸೋಪು ಮತ್ತು ಶಾಂಪೂ 8-20%
ವಾಷಿಂಗ್ ಪೌಡರ್ 3-10%
ಟೀ ಸೊಪ್ಪು 4-8%
ಮಕ್ಕಳ ಆಹಾರ 3-7%
ನೂಡಲ್ಸ್ 9-20% ರಷ್ಟು ಬೆಲೆ ಏರಿಕೆಯಾಗಿದೆ.
ರೈತರು 1 ಲೀಟರ್ ಎಣ್ಣೆಗೆ 14 ಕೆ.ಜಿ ಗೋಧಿ ಮಾರಬೇಕು:
ಈ ಸಮಯದಲ್ಲಿ ರೈತರ ಸ್ಥಿತಿ ಊಹಿಸಿಕೊಳ್ಳಿ. ಅವರು ಪ್ರತಿ ಲೀಟರ್ ಅಡುಗೆ ಎಣ್ಣೆಗೆ 14 ಕೆ.ಜಿ ಯಷ್ಟು ಗೋಧಿ ಮಾರಬೇಕಿದೆ. ಒಂದು ತಿಂಗಳಿಗೆ ಬೇಕಾದ ಅಡುಗೆ ಎಣ್ಣೆಗೆ ಕ್ವಿಂಟಲ್ ನಷ್ಟು ಗೋಧಿ ಮಾರಬೇಕು.ರೈತರ ಬೆಳೆಗೆ ಸಿಗುತ್ತಿರುವ ಬೆಲೆ ಹಾಗೂ ಅವರ ಜೀವನ ವೆಚ್ಚದ ನಡುವಣ ವ್ಯತ್ಯಾಸ ಹೆಚ್ಚಾಗಿದ್ದು, ಇದು ಮಹಾಪರಾಧ ಎಂದು ಟೀಕಿಸಿದ್ರು.
ಅತಿಯಾದ ಆಮದು ಸುಂಕ:
ಕಳೆದ ಕೆಲವು ವರ್ಷಗಳಿಂದ ಮೋದಿ ಸರ್ಕಾರ ರೂಪಾಯಿ ಮೌಲ್ಯ ಕುಸಿದರೂ ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಿಸಿದೆ. ಇದರಿಂದ ಅಡುಗೆ ಎಣ್ಣೆ, ಬೇಳೆ ಹಾಗೂ ಗೃಹಬಳಕೆ ವಸ್ತುವಿನ ಬೆಲೆ ಹೆಚ್ಚಿಸಿದೆ.
ಅಸಂಬದ್ಧ ಜಿಎಸ್ಟಿ ದರ:
ಹಲವು ಎಚ್ಚರಿಕೆ ಹಾಗೂ ಸಲಹೆಗಳ ಹೊರತಾಗಿಯೂ ಜಿಎಸ್ಟಿ ಹೆಚ್ಚಿನ ದರ ವಿಧಿಸಲಾಗಿದೆ. ಟೂತ್ ಪೇಸ್ಟ್, ಆಹಾರ ಪದಾರ್ಥ, ಗೃಹಬಳಕೆ ವಸ್ತುಗಳ ಮೇಲೆ ಶೇ.12-18ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಇದರಿಂದಾಗಿ ದೇಶದ ಶ್ರೀಮಂತ ಹಾಗೂ ಬಡವ ಒಂದೇ ರೀತಿಯಲ್ಲಿ ಪರೋಕ್ಷವಾಗಿ ತೆರಿಗೆ ಕಟ್ಟುವಂತಾಗಿದೆ.
ತೈಲಬಾಂಡ್ ಗಳ ಸುಳ್ಳು ಪ್ರಚಾರ:
ಕೇಂದ್ರ ಸರ್ಕಾರ ಕಳೆದ 7 ವರ್ಷಗಳಿಂದ ಅಧಿಕಾರ ನಡೆಸಿದ್ದರೂ ಬೆಲೆ ಏರಿಕೆ ವಿಚಾರದಲ್ಲಿ ನಾಚಿಕೆ ಇಲ್ಲದೆ ಈ ಹಿಂದಿನ ಸರ್ಕಾರವನ್ನು ಟೀಕಿಸಲು ಮುಂದಾಗಿದೆ. ಗ್ರಾಹಕರನ್ನು ರಕ್ಷಿಸಲು ತೈಲ ಬಾಂಡ್ ಗಳನ್ನು ಪರಿಚಯಿಸಲಾಯಿತು. ಕಳೆದ 7 ವರ್ಷಗಳಲ್ಲಿ ತೈಲ ಬಾಂಡ್ ಗಳಿಂದ ಆಗಿರುವ ಹೊರೆ ಅತ್ಯಲ್ಪ. ಮೋದಿ ಸರ್ಕಾರ ಈ ಅವಧಿಯಲ್ಲಿ ಜನರಿಂದ ಸುಂಕದ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಕೇವಲ ಶೇ.3.5ರಷ್ಟನ್ನು ಮಾತ್ರ ತೈಲಬಾಂಡ್ ಗೆ ವ್ಯಯಿಸಿದೆ.
ಇಂಧನ ದರ ಇಳಿಕೆ, ಪರಿಷ್ಕೃತ ಆಮದು ಸುಂಕ, ಸಮಂಜಸ ಜಿಎಸ್ಟಿಗೆ ಒತ್ತಾಯ:
ಈ ಆರ್ಥಿಕ ನಿರ್ವಹಣೆ ವೈಫಲ್ಯ ಸರ್ಕಾರದ ಆರ್ಥಿಕತೆ ಕುರಿತ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ನಮ್ಮ ಜಿಡಿಪಿಯ ಶೇ.60ರಷ್ಟು ಬಳಕೆಯಾಗುತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದ ಜನ ಉದ್ಯೋಗ ಕಳೆದುಕೊಂಡಿದ್ದು,ವೇತನ ಕಡಿತವಾಗಿರುವುದರಿಂದ ಬೇಡಿಕೆ ಕುಸಿದಿದೆ. ಇದನ್ನು ಸರಿಪಡಿಸಿ, ಬೇಡಿಕೆ, ಬಂಡವಾಳ ಹಾಗೂ ಉದ್ಯೋಗ ಮರುಕಲಿಸಲು ಜನರ ಕೈಗೆ ಹಣ ನೀಡುವ ನ್ಯಾಯ್ ಯೋಜನೆ ಅಗತ್ಯವಾಗಿದೆ.
ಜನರ ಮೇಲಿನ ಹೊರೆ ಇಳಿಸಲು ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಬೆಲೆ ಇಳಿಸಬೇಕು. ಆಮದು ಸುಂಕ ಪರಿಶೀಲಿಸಬೇಕು. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
ಈ ಎಲ್ಲ ವಿಚಾರಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ಜತೆಗೆ ಜನರಿಗೆ ಪರಿಹಾರ ನೀಡುವಂತೆ ಕಾಂಗ್ರೆಸ್ ಆಗ್ರಹಿಸಲಿದೆ ಎಂದರು.
Related Articles
Thank you for your comment. It is awaiting moderation.
Comments (0)