ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಲಾರೆ, ಶಿಡ್ಲಘಟ್ಟಕ್ಕೂ ನಾನೇ ಶಾಸಕನಿದ್ದಂತೆ: ಸುಧಾಕರ್
- by Suddi Team
- December 18, 2020
- 33 Views

ಚಿಕ್ಕಬಳ್ಳಾಪುರ: ಬಿಜೆಪಿ ಪ್ರಾತಿನಿಧ್ಯ ಇಲ್ಲ ಎಂದು ಶಿಡ್ಲಘಟ್ಟ ಕ್ಷೇತ್ರದ ಜನತೆ ಕೊರಗುವ ಅಗತ್ಯವಿಲ್ಲ. ಚಿಕ್ಕಬಳ್ಳಾಪುರಕ್ಕೆ ನೀಡಿರುವ ಪ್ರಾಮುಖ್ಯತೆಯನ್ನೇ ಈ ಭಾಗಕ್ಕೂ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದ್ದಾರೆ.
ನಮ್ಮನ್ನು ಗಮನಿಸಿಕೊಳ್ಳುವವರು ಯಾರೂ ಇಲ್ಲ, ಅಭಿವೃದ್ಧಿಯಿಂದ ಹಿನ್ನಡೆ ಆಗುತ್ತದೆ ಎಂಬ ಅನಾಥಪ್ರಜ್ಞೆಯನ್ನು ಶಿಡ್ಲಘಟ್ಟದ ಜನತೆ ಹೊಂದುವ ಅಗತ್ಯವಿಲ್ಲ. ಚಿಕ್ಕಬಳ್ಳಾಪುರದಂತೆ ಇಲ್ಲಿಗೂ ನಾನೇ ಶಾಸಕ, ನಾನೇ ಮಂತ್ರಿ ಎಂಬ ಮನೋಭಾವದಿಂದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುಧಾಕರ್ ಹೇಳಿದ್ದಾರೆ.
ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸುಧಾಕರ್, ತಾಲ್ಲೂಕಿನಲ್ಲಿ ಬಿಜೆಪಿ ಶಾಸಕರಿಲ್ಲ ಎಂಬ ಕಾರಣಕ್ಕೆ ಅಭಿವೃದ್ಧಿ ಕೆಲಸಗಳಲ್ಲಿ ರಾಜಕಾರಣ ಬೆರೆಸುತ್ತಿಲ್ಲ. ಸ್ವಂತ ಕ್ಷೇತ್ರದಂತೆ ಶಿಡ್ಲಘಟ್ಟವನ್ನೂ ಪರಿಗಣಿಸಿದ್ದೇನೆ. ಇಲ್ಲಿನ ಕೆರೆಗಳಿಗೂ ಈಗಾಗಲೇ ನೀರು ಹರಿಸಲಾಗುತ್ತಿದೆ. ನೀರು ತುಂಬಿಸುವ ಆರಂಭಿಕ ಸಭೆಯಲ್ಲಿ ಮಾಜಿ ಶಾಸಕರಾದ ರಾಜಣ್ಣ ಅವರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಪಟ್ಟು ಹಿಡಿದಿದ್ದರು. ಅವರು ಶಾಸಕರಾಗಿದ್ದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ವೆತ್ಯಾಸ ಇರುವುದು ಈಗಾಗಲೇ ಜನರಿಗೆ ಮನವರಿಕೆ ಆಗಿದೆ ಎಂದರು.
ನೀರು ಕೊಟ್ಟವರನ್ನು, ಅನ್ನ ನೀಡಿದವರನ್ನು, ಅಕ್ಷರ ಕೊಟ್ಟವರನ್ನು ಯಾರೂ ಕೂಡ ಮರೆಯಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ರಾಜಣ್ಣ ಮತ್ತು ಬಿಜೆಪಿ ಪಕ್ಷವನ್ನು ಜನತೆ ಮತ್ತು ಕಾರ್ಯಕರ್ತರು ಬೆಂಬಲಿಸಿ ಮುಂಬರುವ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆ ಮೂಲಕ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸಮಾಧಿ ತೋಡಿಕೊಂಡಿದೆ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ದೇಶಾದ್ಯಂತ ಜನರು ಮೋದಿ ಅವರ ಸರ್ಕಾರದ ಹಗರಣ ಮುಕ್ತ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಹಗರಣದಿಂದ ಜನ ರೋಸಿ ಹೋಗಿದ್ದರು. ಹೀಗಾಗಿಯೇ ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಮೊನ್ನೆ ರಾಜ್ಯ ವಿಧಾನಪರಿಷತ್ತಿನಲ್ಲಿ ಅವರ ನಡುವಳಿಕೆ ಗಮನಿಸಿದ ಮೇಲೆ ಅವರನ್ನು ಬೇರೆ ಯಾವುದೇ ಪಕ್ಷ ವಿರೋಧಿಸುವ ಅಥವಾ ಹಿಂದಿಕ್ಕುವ ಅಗತ್ಯವಿಲ್ಲ ಅವರ ಸಮಾಧಿ ಅವರೇ ತೋಡಿಕೊಳ್ಳುತ್ತಿರುವುದು ಖಾತರಿಯಾದಂತಾಗಿದೆ ಎಂದು ಲೇವಡಿಯಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ರೈತರಲ್ಲಿ ದೊಡ್ಡ ಮಟ್ಟದ ರಾಜಕೀಯ ಪ್ರಜ್ಞೆ ಇದೆ. ಹಳ್ಳಿಯಿಂದ ದಿಲ್ಲಿವರೆಗಿನ ಬೆಳವಣಿಗೆಗಳನ್ನು ಅವರು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ ಅವರಿಗೆ ರಾಜಕಾರಣದ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವ ದಿಟ್ಟಿ ನಿಲುವನ್ನು ಈಗಾಗಲೇ ಅವರು ತೆಗೆದುಕೊಂಡಿದ್ದಾರೆ. ಇನ್ನೂ ಜೆಡಿಎಸ್ ಪಕ್ಷದ ಬಹುತೇಕ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ರಾಜಣ್ಣ ಅವರ ಜತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ತತ್ವ,ಸಿದ್ಧಾಂತಗಳನ್ನು ಒಪ್ಪಿ ಬಂದಿರುವ ಎಲ್ಲರನ್ನೂ ಮುಕ್ತ ಮನಸ್ಸಿನಿಂದ ಬರಮಾಡಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷ ಬೆಂಬಲಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.
ರೇಷ್ಮೆ ಬೆಳೆಗಾರರಿಗೆ ನೆರವು: ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ಈ ಭಾಗದ ಬೆಳೆಗಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸಿಗಬೇಕಿರುವ ಎಲ್ಲ ನೆರವನ್ನೂ ದೊರಕಿಸಲು ಕೋಲಾರ ಸಂಸದರ ಜತೆ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದ ಸಚಿವರು, ಮುಂದಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಉನ್ನತಮಟ್ಟದ ಮಾಹಿತಿ ಮತ್ತು ನೆರವು ದೊರಕಿಸುವ ನಿಟ್ಟಿನಲ್ಲಿ ತಜ್ಞರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳನ್ನು ಇಲ್ಲಿಗೆ ಕರೆತಂದು ಕಾರ್ಯಾಗಾರ ಆಯೋಜಿಸಲಾಗುವುದು ಎಂದೂ ಪ್ರಕಟಿಸಿದರು.
Related Articles
Thank you for your comment. It is awaiting moderation.
Comments (0)