ಎಲ್ಲಾ ಮನೆಗಳಿಗೆ ಶುದ್ಧ ಕುಡಿವ ನೀರು : ಅಶ್ವತ್ಥ ನಾರಾಯಣ
- by Suddi Team
 - September 11, 2020
 - 66 Views
 
                                                          ರಾಮನಗರ: ಲಭ್ಯವಿರುವ ಜಲ ಮೂಲಗಳಿಂದ ಶಾಶ್ವತ ಶುದ್ಧ ಕುಡಿಯುವ ನೀರನ್ನು ಜಿಲ್ಲೆಯಲ್ಲಿರುವ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ಪೂರೈಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.
ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರನ್ನು ಪೂರೈಸುವಂಥ ಯೋಜನೆಗಳಿಗೆ ಸಂಬಂಧಿಸಿದಂತೆ ಅಶ್ವತ್ಥ ನಾರಾಯಣ ಅವರು ಇಂದು ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿರುವ ಜಲಮೂಲಗಳು ಮತ್ತು ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಉಪಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿರುವ ಸುರಂಗ ಮಾರ್ಗಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ನೆಟ್ಕಲ್ ಗ್ರಾಮದ ಪೈಪ್ ಯಾರ್ಡ್ ಪ್ರದೇಶಕ್ಕೂ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಇಗ್ಲೂರು ಗ್ರಾಮದಲ್ಲಿರುವ ಕಣ್ವ ಜಲಾಶಯವನ್ನು ವೀಕ್ಷಿಸಿದರು.
ಕಣ್ವ ಜಲಾಶಯದ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮತ್ತು ಅತಿವೃಷ್ಠಿಯ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿಲ್ಲ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತಿವೆ. ಇದಕ್ಕೆ ನಿದರ್ಶನ ಎನ್ನುವಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಮನೆಗಳಿಗೂ ಶುದ್ಧ ನೀರನ್ನು ಪೂರೈಸುವ 250 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿರುವುದೇ ಸಾಕ್ಷಿಯಾಗಿವೆ ಎಂದರು.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗೆ ಆದ್ಯತೆ ನೀಡಿ ವಿವಿದ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಅದರಲ್ಲೂ, ಪ್ರಮುಖವಾಗಿ 210 ಕೋಟಿ ರೂ.ಗಳ ವೆಚ್ಚದಲ್ಲಿ ಕೋಡಿಹಳ್ಳಿ ಹಾಗೂ ಇತರೆ 299 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ, 4 ಕೋಟಿ ರೂ.ಗಳ ವೆಚ್ಚದಲ್ಲಿ ಸಾತನೂರು ಹಾಗೂ ಇತರೆ 29 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಹಾಗೂ 2 ಕೋಟಿ ರೂ.ಗಳ ವೆಚ್ಚದಲ್ಲಿ ಹಾರೋಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಕನಕಪುರ ತಾಲೂಕಿನ ಕೋಡಿಹಳ್ಳಿ ಹಾಗೂ 298 ಜನವಸತಿಗಳಿಗೆ ಕಾವೇರಿ ನದಿಯಿಂದ ಶುದ್ಧ ನೀರನ್ನು ಪೂರೈಸಲು 210 ಕೋಟಿ ರೂ.ಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಯೋಜನೆಯ ಪ್ರಗತಿಯು ವಿವಿಧ ಹಂತದಲ್ಲಿದೆ. ಯೋಜನೆಯ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ನುಡಿದರು.
ಶ್ರೀರಂಗ ಏತ ನೀರಾವರಿ: ಮಾಗಡಿ ತಾಲ್ಲೂಕಿನ 211 ಹಳ್ಳಿಗಳಿಗಳಿಗೆ ಕುಡಿಯುವ ನೀರು ಒದಗಿಸುವ ಪರಿಷ್ಕೃತ ಶ್ರೀರಂಗ ಏತ ನೀರಾವರಿ ಯೋಜನೆಗಾಗಿ ಒಟ್ಟು 450 ಕೋಟಿ ರೂ.ಗಳಿಗೆ ಸಚಿವ ಸಂಪುಟದಲ್ಲಿ ಅನುಮತಿ ಪಡೆದುಕೊಳ್ಳಲಾಗಿದೆ. ಈಗಾಗಲೇ ಈ ಯೋಜನೆಗಾಗಿ 277 ಕೋಟಿ ರೂ.ಗಳು ಬಿಡುಗಡೆಯಾಗಿತ್ತು. ಈಗ 173 ಕೋಟಿ ರೂ.ಗಳ ಹೆಚ್ಚುವರಿ ಅನುದಾನವು ಸಹ ಬಿಡುಗಡೆ ಆಗಲಿದೆ. ಹಾಕಿಕೊಂಡಿರುವ ಗುರಿಯಂತೆ ಒಂದು ವರ್ಷದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಅವರು ನುಡಿದರು.
ತಾಲ್ಲೂಕಿಗೂ ನೀರು: ಒಟ್ಟು 540 ಕೋಟಿ ರೂ.ಗಳ ವೆಚ್ಚದ ಸತ್ತೇಗಾಲ ಕುಡಿಯುವ ನೀರು ಯೋಜನೆಯ ಕಾಮಗಾರಿ ಪೂರ್ಣಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಮೊಗೇನಹಳ್ಳಿ ಕೆರೆ ಮತ್ತು ಕಣ್ವ ಜಲಾಶಯಕ್ಕೆ ನೀರನ್ನು ತುಂಬಿಸಲಾಗುವುದು. ಪುನಃ ಅಲ್ಲಿಂದ ಮಂಚನಬೆಲೆ ಜಲಾಶಯ ಮತ್ತು ವೈ.ಜಿ.ಗುಡ್ಡ ಕೆರೆಗೆ ತಂದು ಅದನ್ನು ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ವಿವರಿಸಿದರು.
ಕೆರೆ ಕಾಮಗಾರಿ: ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲ್ಲೂಕಿನ ಗರಳಾಪುರ ಹಾಗೂ ಇನ್ನಿತರ 12 ಕೆರೆಗಳಿಗೆ ಎರಡು ಹಂತಗಳಲ್ಲಿ 70 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸಲಾಗುವುದು. ಭೂಸ್ವಾಧೀನದ ಸಮಸ್ಯೆ ಪರಿಹರಿಸಿಕೊಂಡು ಕಾಮಗಾರಿಯನ್ನು ಚುರುಕುಗೊಳಿಸಲಾಗುವುದು. ಅರ್ಕಾವತಿಯಲ್ಲಿ ಹೂಳು ತೆಗೆಯುವುದರಿಂದ 1.5 ಟಿಎಂಸಿ ನೀರನ್ನು ಸಂಗ್ರಹಿಸುವಂತೆ ಆಗಿದೆ ಎಂದು ಅವರು ತಿಳಿಸಿದರು.
ಕೆರೆ ಪುನಶ್ಚೇತನ : 110 ಕೋಟಿ ರೂ.ಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯ ಪುನಶ್ಚೇತನ ಕಾಮಗಾರಿ. 70 ಕೋಟಿ ರೂ.ಗಳ ವೆಚ್ಚದಲ್ಲಿ ದೊಡ್ಡಾಲಹಳ್ಳಿ ಮೈಕ್ರೋ ಇರಿಗೇ?ನ್ ಕಾಮಗಾರಿ ಹಾಗೂ 252 ಕೋಟಿ ರೂ.ಗಳ ವೆಚ್ಚದಲ್ಲಿ ನಾರಾಯಣಪುರ, ಗರಳಪುರ ಮತ್ತು ಸಾತನೂರು ಏತ ನೀರವಾರಿ ಯೋಜನೆಗಳಿಂದ ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಕೇಂದ್ರಕ್ಕೆ ಪ್ರಸ್ತಾವನೆ: 1800 ಕೋಟಿ ರೂ.ಗಳ ವೆಚ್ಚದಲ್ಲಿ ಕಾವೇರಿ ನದಿ ನೀರನ್ನು ಜಿಲ್ಲೆಯ ಕಣ್ವ, ಮಂಚನಬೆಲೆ, ಇಗ್ಗಲೂರು ಹಾಗೂ ವೈ.ಜಿ ಗುಡ್ಡ ಜಲಾಶಯಗಳಿಗೆ ತುಂಬಿಸಿ, ಇಲ್ಲಿಂದ ಈ ಜಿಲ್ಲೆಯ ವಸತಿ ಪ್ರದೇಶಗಳಿಗೆ ನೀರು ಒದಗಿಸುವ ಪ್ರಸ್ತಾವನೆಗೆ ಕೇಂದ್ರದಿಂದ ಅನುಮೋದನೆ ದೊರೆತ ತಕ್ಷಣ ಚಾಲನೆ ನೀಡಲಾಗುವುದು ಎಂದರು.
ಮಕ್ಕಳ ಪ್ರಪಂಚ : ಕಣ್ವ ಜಲಾಶಯದ ಬಳಿ ಮಕ್ಕಳ ಪ್ರಪಂಚ (ಚಿಲ್ಡ್ರನ್ ವರ್ಲ್ಡ್) ನಿರ್ಮಾಣಕ್ಕಾಗಿ 5 ಎಕರೆ 10 ಗುಂಟೆ ಭೂಮಿ ಮತ್ತು 2 ಕೋಟಿ ರೂ.ಗಳನ್ನು ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಈ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಇದನ್ನು ನಿರ್ಮಿಸಲು ಒತ್ತು ನೀಡಲಾಗುವುದು ಎಂದರು.
ಕಲಾಗ್ರಾಮ: ರಾಮನಗರ ಜಿಲ್ಲೆಯ ವಿಶಿಷ್ಟ ಕಲೆಯಾದ ಚನ್ನಪ್ಟಣದ ಗೊಂಬೆ ಮತ್ತು ರೇಷ್ಮೆಗೆ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಬೆಂಗಳೂರು – ಮೈಸೂರು ಹೆದ್ದಾರಿ ನಡುವೆ 50 ಎಕರೆ ಪ್ರದೇಶದಲ್ಲಿ ಕಲಾಗ್ರಾಮವನ್ನು ರೂಪಿಸುವ ಉದ್ದೇಶವಿದೆ. ಹೆದ್ದಾರಿಯಲ್ಲಿ ಇಷ್ಟು ವಿಶಾಲ ಪ್ರದೇಶ ಲಭ್ಯವಾಗದಿದ್ದರೂ ಕಲಾಗ್ರಾಮವನ್ನು ರೂಪಿಸುವ ಉದ್ದೇಶದಿಂದ ಹಿಂದೆ ಸರಿಯುವುದಿಲ್ಲ. ಜಾಗಕ್ಕಿಂತ ಮುಖ್ಯವಾಗಿ ಇಲ್ಲಿನ ಜನರಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಿಕೊಡಬೇಕು. ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ಅವರ ಕಲೆಗೆ ಮನ್ನಣೆದೊರಕಬೇಕು. ಜನರಿಗೆ ಇಂತಹ ಉತ್ಪನ್ನಗಳನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ನೋಡಲು ಅವಕಾಶ ಕಲ್ಪಿಸುವುದೇ ಈ ಯೋಜನೆ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ರಾಮನಗರ ಜಿಲ್ಲಾ ಪಂಚಯಿತಿ ಸಿಇಒ ಇಕ್ರಂ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)