ಬಾಗಲಕೋಟೆ : ಕೋವಿಡ್ ಪ್ರಕರಣ ಹೆಚ್ಚಾಗುವ ಪ್ರದೇಶಗಳಲ್ಲಿ ಲಾಕ್‍ಡೌನ್‍ಗೆ ಡಿಸಿಎಂ‌ ಸೂಚನೆ

ಬಾಗಲಕೋಟೆ: ಜುಲೈ 15 : ಬಾಗಲಜೋಟೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿಗೆ ಕಂಡುಬಂದ ಪ್ರದೇಶಗಳಲ್ಲಿ ಅಗತ್ಯವಿದ್ದರೆ ಲಾಕ್‍ಡೌನ್‍ ಘೋಷಿಸಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಜರುಗಿದ ಕೋವಿಡ್ ಹಾಗೂ ಇತರೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಾಗಲಕೋಟೆ, ಮುಧೋಳ, ಇಲಕಲ್ಲ ಹಾಗೂ ಕಲಾದಗಿ ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಕೋವಿಡ್ ಪ್ರಕರಣಗಳು ಹೆಚ್ಚಿಗೆಯಾಗುವುದನ್ನು ತಡೆಗಟ್ಟಲು ಅಗತ್ಯವಿದ್ದರೆ ಆ ವ್ಯಾಪ್ತಿಯಲ್ಲಿ ಲಾಕ್‍ಡೌನ್‍ಗೆ ಕ್ರಮಕೈಗೊಳ್ಳಲು ಸೂಚಿಸಿದರು.
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸುವುದಿಲ್ಲ. ಲಾಕ್‍ಡೌನ್ ಹೇರಿದರೆ ರೈತರಿಗೆ, ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಆದರೆ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜನರು ಪಾಲಿಸಬೇಕು. ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದರ ಜೊತೆಗೆ ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರು ಸಹ ಸಹಕಾರ ನೀಡುವುದು ಅಗತ್ಯವಾಗಿದೆ. ಕೆಮ್ಮು, ನೆಗಡಿ, ಜ್ವರ ಬಂದರೆ ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳ ಹೊರ ವಲಯಗಳಲ್ಲಿರುವ ವಸತಿ ನಿಲಯಗಳನ್ನು ಸಜ್ಜುಗೊಳಿಸಬೇಕು. ಅಗತ್ಯವಿದ್ದರೆ ಅವುಗಳನ್ನು ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಬೇಕು. ಬಾಗಲಕೋಟೆಯ ನವಗರದಲ್ಲಿರುವ ಅಲ್ಪಸಂಖ್ಯಾತರ ವಸತಿ ನಿಲಯವನ್ನು ಕೋವಿಡ್ ಹೆಲ್ತ ಕೇರ್ ಸೆಂಟರಾಗಿ ಪರಿವರ್ತಿಸಲಾಗಿದೆ. ಕ್ವಾರಂಟೈನ್‍ನಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಡಿಸಿ ಸ್ಯಾಂಪಲ್ ತೆಗೆದುಕೊಳ್ಳಲು ತಿಳಿಸಿದರು.

ಅಗತ್ಯವಿದ್ದರೆ ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗಳು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ತಿಳಿಸಿದರು. ವೈದ್ಯ ಮತ್ತು ಸಿಬ್ಬಂದಿಗಳಿಗೆ ಅನಗತ್ಯವಾಗಿ ರಜೆ ಮೇಲೆ ತೆರಳಬಾರದು. ಖಾಸಗಿ ಆಸ್ಪತ್ರೆಗಳು ಫಿವರ್ ಕ್ಲಿನ್‍ಗಳಾಗಿದ್ದು, ಅಲ್ಲಿಯೂ ಸಹ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಫಿವರ್ ಕ್ಲಿನಿಕ್ ಬಗ್ಗೆ ಬೋರ್ಡ ಹಾಕಲು ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಕೋವಿಡ್‍ನ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ವಿಸ್ತೃತವಾಗಿ ತಿಳಿಸಿದರು. ಸಭೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ  ಎಸ್.ಆರ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Comments (0)

Leave a Comment