ಬೆಂಗಳೂರಿನ ವಲಯವಾರು ಉಸ್ತುವಾರಿ ಅಧಿಕಾರಿಗಳ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮಾಲೋಚನೆ
- by Suddi Team
- July 15, 2020
- 45 Views

ಬೆಂಗಳೂರು – ಜುಲೈ 15, 2020 : ರಾಜಧಾನಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದು ಅದರ ಅನ್ವಯ ಕಾರ್ಯ ನಿರ್ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ವಲಯವಾರು ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎರಡು ತಾಸಿಗೂ ಹೆಚ್ಚು ಕಾಲ ಅಧಿಕಾರಗಳ ಜತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಮಾಹಿತಿ ಪಡೆದ ಸಚಿವರು, ನಿರ್ದಿಷ್ಟ ಹೊಣೆಗಾರಿಕೆ ವಹಿಸಿಕೊಂಡಿರುವ ಅಧಿಕಾರಿಗಳು ಇತರೆ ಸಹೋದ್ಯೋಗಿಗಳ ಜತೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ಲಾಕ್ ಡೌನ್ ಅವಧಿ ಮುಕ್ತಾಯಗೊಳ್ಳುವ ಮುನ್ನ ಬೂತ್ ಮಟ್ಟದಲ್ಲಿ ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಸಮಿತಿಗಳ ರಚನೆ ತರಬೇತಿ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಮುಗಿಸಬೇಕು. ಆ ನಂತರ ಸಮಿತಿ ಸದಸ್ಯರು ತಮಗೆ ನಿಗದಿಗೊಳಿಸಿರುವ ಬೂತ್ ಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದರು.
ಸಮೀಕ್ಷೆ ವೇಳೆ ಐಎಲ್ ಐ ಮತ್ತು ಸಾರಿ ಪ್ರಕರಣಗಳ ತಪಾಸಣೆ ನಡೆಸಿ ರೋಗ ಲಕ್ಷಣ ಆಧರಿಸಿ ಅವರನ್ನು ಹೋಮ್ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಸಮಿತಿ ಸದಸ್ಯರಿಗೆ ಮಾರ್ಗಸೂಚಿ ಬಗ್ಗೆ ತರಬೇತಿ ಸಮಯದಲ್ಲೇ ಮನವರಿಕೆ ಮಾಡಿಕೊಡಬೇಕು. ಅವರಿಗೆ ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಒದಗಿಸಬೇಕು. ಆಂಬ್ಯುಲೆನ್ಸ್ ಒದಗಿಸುವುದು ಸಮಿತಿ ಜವಾಬ್ದಾರಿ ಆಗಬೇಕು. ಸಂಪರ್ಕಿತರ ಪತ್ತೆ ಕಾರ್ಯವೂ ಮರು ಆರಂಭ ಆಗಬೇಕು ಎಂದು ತಿಳಿಸಿದರು.
ವಲಯವಾರು ಉಸ್ತುವಾರಿ ಅಧಿಕಾರಿಗಳು ಪ್ರತಿದಿನ ಈ ಎಲ್ಲಾ ಕೆಲಸಗಳ ಮೇಲೆ ನಿಗಾವಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಜತೆಗೆ ತಮ್ಮ ವ್ಯಾಪ್ತಿಗೆ ಸೇರಿರುವ ಲ್ಯಾಬ್ ಗಳ ಪರೀಕ್ಷೆ ಮತ್ತು ಕಾರ್ಯ ನಿರ್ವಹಣೆ ಮೇಲೂ ನಿಗಾ ಇಡಬೇಕು. ಒಂದು ವಾರದೊಳಗೆ ಯಾವುದೇ ಸ್ಯಾಂಪಲ್ ಬಾಕಿ ಇಲ್ಲದಂತೆ ನೋಡಿಕೊಳ್ಳಬೇಕು. ಇದರ ಸಮನ್ವಯವನ್ನು ಹಿರಿಯ ಅಧಿಕಾರಿ ಶಾಲೀನಿ ರಜನೀಶ್ ಅವರು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕೊಳಚೆ ಪ್ರದೇಶ ಮತ್ತು ಹೋಮ್ ಕ್ವಾರಂಟೈನ್ ಸೌಲಭ್ಯಗಳಿಲ್ಲದ ಜನವಸತಿ ಪ್ರದೇಶಗಳಲ್ಲಿ ಪಾಸಿಟಿವ್ ಆದವರನ್ನು ಸರ್ಕಾರಿ ವ್ಯವಸ್ಥೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡುವ ಕೆಲಸ ಆಗಬೇಕು. ಇದಕ್ಕಾಗಿ ಮುಂಬಯಿ ಧಾರಾವಿಯಲ್ಲಿ ಅಳವಡಿಸಿಕೊಂಡಿರುವ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು.
ವಲಯವಾರು ಅಗತ್ಯ ವಿರುವ ವಾಹನ ಮತ್ತು ಸಿಬ್ಬಂದಿ ಕೊರತೆಯನ್ನು ಬಿಬಿಎಂಪಿ ಆಯುಕ್ತರು ನಿರ್ವಹಿಸಬೇಕು. ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ಕೊರತೆ ನಿವಾರಿಸುವ ಕೆಲಸವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ನೋಡಿಕೊಳ್ಳಬೇಕು ಎಂದು ಆದೇಶ ನೀಡಿದರು.
Related Articles
Thank you for your comment. It is awaiting moderation.
Comments (0)