ಮೇಕೆದಾಟು ಯೋಜನೆಗೆ ಅನುಮತಿ:ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ
- by Suddi Team
- October 4, 2018
- 882 Views
ನವದೆಹಲಿ: ಪ್ರಸ್ತಾವಿತ ಮೇಕೆದಾಟು ಯೋಜನೆ ಜಾರಿಗಾಗಿ ಕರ್ನಾಟಕ ಸರ್ಕಾರಕ್ಕೆ ಅಗತ್ಯ ಅನುಮತಿ ನೀಡಲಾಗುವುದು ಎಂದು ಕೇಂದ್ರದ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ನವದೆಹಲಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆ ಕುರಿತು ಮಾತುಕತೆ ನಡೆಸಿದ್ರು.
ಕಾವೇರಿ ನದಿ ನೀರಿನ ಸದ್ಬಳಕೆ ಹಾಗೂ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲಿರುವ ಈ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಕಾವೇರಿ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಈ ಯೋಜನೆಯಿಂದ ಉಲ್ಲಂಘನೆಯಾಗದು ಎಂದು ದೇವೇಗೌಡ ಅವರು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ರು.
ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ಕಾವೇರಿಯ ಹೆಚ್ಚುವರಿ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿರುವ ಕರ್ನಾಟಕ, ಜಲವಿದ್ಯುತ್ ಉತ್ಪಾದನೆ ಹಾಗೂ ಬೆಂಗಳೂರು, ರಾಮನಗರ ಮತ್ತು ಕನಕಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ರೂಪುರೇಷೆ ಸಿದ್ಧಪಡಿಸಿದೆ ಎಂದು ವಿವರಣೆ ನೀಡಿದರು.
ದೇವೇಗೌಡ ಅವರಿಂದಮನವಿ ಸ್ವೀಕರಿಸಿದ ಬಳಿಕ, ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದಾರೆ.ಇದರಿಂದಾಗಿ ಮೇಕೆದಾಟು ಯೋಜನೆ ಆರಂಭಕ್ಕೆ ಸಧ್ಯದಲ್ಲೇ ಚಾಲನೆ ಸಿಗುವ ನಿರೀಕ್ಷೆ ಮೂಡಿಸಿದೆ.
Related Articles
Thank you for your comment. It is awaiting moderation.


Comments (0)