ಮಹದಾಯಿ ನೀರನ್ನು ಸದುಪಯೋಗಿಸಿಕೊಳ್ಳಲು 15 ದಿನಗಳಲ್ಲಿ ರೂಪುರೇಷೆ: ಸಿಎಂ ಕುಮಾರಸ್ವಾಮಿ
- by Suddi Team
- September 15, 2018
- 105 Views
ಬೆಳಗಾವಿ: ಮಹದಾಯಿ ನೀರನ್ನು ಯಾವ ರೀತಿ ಸದುಪಯೋಗಿಸಿಕೊಳ್ಳಬೇಕೆಂಬ ಕುರಿತು ರಾಜ್ಯದ ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರೊಂದಿಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದ್ದು, 15
ದಿನಗಳೊಳಗಾಗಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
ನೂತನವಾಗಿ ನಿರ್ಮಾಣಗೊಂಡ ಕನ್ನಡ ಭವನವನ್ನು
ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಹದಾಯಿ ಹೋರಾಟಗಾರರ ಮೇಲಿನ ಕೇಸ್ಗಳನ್ನು ಶೀಘ್ರವೇ ಹಿಂಪಡೆಯಲಾಗುವುದು ಎಂದು ಹೇಳಿದರು.
ಬಾಕಿ ಕಾಮಗಾರಿಗೆ ರೂ. 1.5 ಕೋಟಿ ಬಿಡುಗಡೆ:
ನೂತನವಾಗಿ ನಿರ್ಮಾಣವಾಗಿರುವ ಕನ್ನಡ ಭವನದಲ್ಲಿ ಇನ್ನೂ ಕೆಲವು ಕಾಮಗಾರಿಗಳು ಬಾಕಿಯಿದ್ದು, ಕಾಮಗಾರಿಗೆ 1.5 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡುವಂತೆ ಸಾಂಸ್ಕೃತಿಕ ಕನ್ನಡ ಭವನ ಸಮಿತಿಯ ಪದಾಧಿಕಾರಿಗಳು ಮನವಿ
ಮಾಡಿದ್ದಾರೆ. ಶೀಘ್ರವೇ ರೂ. 1.5 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
2006 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇಂದು ಈ ಭವನವನ್ನು ತಾವೇ ಉದ್ಘಾಟಿಸುತ್ತಿರುವುದನ್ನು ಸ್ಮರಿಸಿ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು. ಕನ್ನಡ ಭವನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಲಾವಿದರು ಹಾಗೂ ಸಾರ್ವಜನಿಕರು ಭವನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಾಲಮನ್ನಾದಿಂದ ಸರ್ಕಾರಕ್ಕೆ ತೊಂದರೆಯಿಲ್ಲ:
ಸರ್ಕಾರ ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ ಘೋಷಣೆ ಮಾಡಿದೆ. ಸಾಲಮನ್ನಾ ಮಾಡಿದ ಹಣಕ್ಕೂ
ಇಲಾಖೆಗಳ ಕಾರ್ಯಕ್ರಮಗಳಿಗೆ ಮೀಸಲಿರಿಸಿರುವ ಹಣಕ್ಕೂ ಯಾವುದೇ ಸಂಬಂಧವಿಲ್ಲ. ಸಾಲಮನ್ನಾದಿಂದ ಸರ್ಕಾರದ ಯಾವುದೇ ಯೋಜನೆಗಳಿಗೆ ತೊಂದರೆಯಾಗಿಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿಗಳು
ಸ್ಪಷ್ಟಪಡಿಸಿದರು.
ರೈತರಿಗೆ ತೊಂದರೆ ನೀಡಬೇಡಿ:
ಕೆಲವು ಬ್ಯಾಂಕ್ನವರು ರೈತರಿಗೆ ಸಾಲ ಪಡೆದುಕೊಂಡ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು
ತಿಳಿದುಬಂದಿದೆ. ಯಾವುದೇ ಬ್ಯಾಂಕ್ನವರು ರೈತರಿಗೆ ಹಣ ನೀಡುವಂತೆ ಕಿರುಕುಳ ನೀಡಬಾರದು ಎಂದು ಸೂಚನೆ ನೀಡಿದರು. ಸರ್ಕಾರದಿಂದ ಘೋಷಣೆ ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್ಗಳ 35 ಸಾವಿರ ಕೋಟಿ ಸಾಲವನ್ನು 4 ವರ್ಷಗಳಲ್ಲಿ ಕಂತುಗಳ
ಮೂಲಕ ಪೂರೈಸಬೇಕೆಂದು ಚರ್ಚೆ ಮಾಡಲಾಗಿತ್ತು. ಆದರೆ ಬರುವ ಜುಲೈನೊಳಗೆ ಎಲ್ಲ ಹಣವನ್ನು ಬ್ಯಾಂಕ್ಗಳಿಗೆ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಆದ್ದರಿಂದ ಬ್ಯಾಂಕ್ನವರು ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.
ಸುವರ್ಣಸೌಧಕ್ಕೆ ಇಲಾಖೆ ಸ್ಥಳಾಂತರ:
ಬೆಳಗಾವಿಯಲ್ಲಿ ವಿಧಾನಸಭೆಯ ಕಲಾಪಗಳು ನಡೆಯಬೇಕೆಂಬ ಉದ್ದೇಶದಿಂದ ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪ್ರಥಮ ಬಾರಿಗೆ ಇಲ್ಲಿ ಕಲಾಪವನ್ನು ಏರ್ಪಡಿಸಿದ್ದೆ. ಸುವರ್ಣಸೌಧ ವರ್ಷದ 365 ದಿನವೂ ಕಾರ್ಯನಿರ್ವಹಿಸಬೇಕೆಂದು ನಾನು
ಕೂಡ ಆಶಿಸುತ್ತಿದ್ದೇನೆ. ಈ ಬಗ್ಗೆ ಶೀಘ್ರ ಸರ್ಕಾರದ ಎಲ್ಲ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಇಲಾಖೆಗಳ ಸ್ಥಳಾಂತರ
ಮಾಡಲಾಗುವುದೆಂದು ಕುಮಾರಸ್ವಾಮಿ ಅವರು ಹೇಳಿದರು.
ಉ.ಕರ್ನಾಟಕ ಜಿಲ್ಲೆಗಳಲ್ಲಿ ಉತ್ಪಾದನೆಗೆ ಒತ್ತು:
ಬೆಳಗಾವಿ, ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಉತ್ಪಾದನಾ ವಲಯವನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಎಲ್ಲ ಜಿಲ್ಲೆಗಳ ಅಭಿವೃದ್ಧಿಗೂ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರದ ಬಗ್ಗೆ ಅಪಪ್ರಚಾರಕ್ಕೆ ಯಾರು ಕೂಡ
ಕಿವಿಗೊಡಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಬೆಳಗಾವಿ ಜಿಲ್ಲೆಯ ಒಡನಾಟ ಸ್ಮರಿಸಿದ ಸಿಎಂ:
ಬೆಳಗಾವಿ ಜಿಲ್ಲೆಯಿಂದಲೇ 2006 ರಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ್ದೆ. ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 19 ಬಾರಿ ಬೆಳಗಾವಿಗೆ ಭೇಟಿ ನೀಡಿದ್ದೆ. ಇಲ್ಲಿಯೇ ವಿಧಾನಸಭೆ ಕಲಾಪಗಳನ್ನು ಆರಂಭಿಸಿದ್ದೆ. ಕನ್ನಡ ಭವನಕ್ಕೂ ಶಂಕುಸ್ಥಾಪನೆ ನೆರವೇರಿಸಿದ್ದೆ. ಬೆಳಗಾವಿ ಜಿಲ್ಲೆಯೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದು,
ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ ಎಂದು ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಸ್ಮರಿಸಿದರು.
Related Articles
Thank you for your comment. It is awaiting moderation.


Comments (0)