ಪಾವಗಡ ತಾಲ್ಲೂಕಿನ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ 5 ಜನೌಷಧಿ ಕೇಂದ್ರ ಮಂಜೂರು: ಕೇಂದ್ರ ಸಚಿವ ಅನಂತ್ ಕುಮಾರ್
- by Suddi Team
- August 26, 2018
- 107 Views

ಬೆಂಗಳೂರು: ರಾಜ್ಯದ ಅತಿ ಹಿಂದುಳಿದ ತಾಲ್ಲೂಕಿನಲ್ಲಿ ಒಂದಾಗಿರುವ ಪಾವಗಡದಲ್ಲಿ ಕುಷ್ಟರೋಗಿಗಳು ಹಾಗೂ ಅಲ್ಲಿನ ಜನರಿಗೆ ವೈದ್ಯಕೀಯ ಸೌಲಭ್ಯ ನೀಡುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ 5 ಜನೌಷಧಿ ಕೇಂದ್ರಗಳನ್ನು ಮಂಜೂರು ಮಾಡುವುದಾಗಿ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಘೋಷಿಸಿದ್ದಾರೆ.
ನಗರದ ಬಸವನಗುಡಿಯಲ್ಲಿಂದು ಶ್ರೀರಾಮಕೃಷ್ಣ ಸೇವಾಶ್ರಮ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿ ಜಪಾನಂದಜಿಯವರ ಅವಿರತ ಸೇವೆಯನ್ನು ಶ್ಲಾಘಿಸಿದರು. ರೋಗಿಗಳ ಸೇವೆಯ ಜಪವನ್ನು ಮಾಡುತ್ತಿರುವ ಅವರು ಅದರಲ್ಲೇ ಆನಂದವನ್ನು ಕಾಣುತ್ತಿದ್ದಾರೆ. ಆದ್ದರಿಂದ ಜಪಾನಂದ ಎಂಬ ಹೆಸರು ಅನ್ವರ್ಥವಾಗಿದೆ ಎಂದರು.
ಬರಗಾಲದ ನಾಡು, ಹಿಂದುಳಿದ ತಾಲ್ಲೂಕಿನಲ್ಲೊಂದಾಗಿರುವ ಪಾವಗಡದಲ್ಲಿ ಕಿತ್ತುತಿನ್ನುವ ಬಡತನವಿದೆ. ಅದಕ್ಕೆ ಖ್ಯಾತಿಯಾಗಿದ್ದ ಈ ತಾಲ್ಲೂಕು ಇದೀಗ ಶ್ರೀರಾಮಕೃಷ್ಣ ಸೇವಾಶ್ರಮದ ಸೇವೆಗೆ ಹೆಸರುವಾಸಿಯಾಗಿರುವುದು ಮಹತ್ಕಾರ್ಯ ಎಂದರು.
ಇಂತಹ ಹಿಂದುಳಿದ ತಾಲ್ಲೂಕಿನಲ್ಲಿ ಕಳೆದ 25 ವರ್ಷಗಳಿಂದ ಅವಿರತ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಭಾರತ ಸರಕಾರದ ವತಿಯಿಂದ 5 ಜನೌಷಧಿ ಕೇಂದ್ರಗಳನ್ನು ಮಂಜೂರು ಮಾಡುವುದಾಗಿ ಇದೇ ಸಂಧರ್ಭದಲ್ಲಿ ಘೋಷಿಸಿದರು. 600 ಕ್ಕೂ ಹೆಚ್ಚು ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ಹತ್ತು ಹಲವು ರೋಗಗಳಿಗೆ ಪರಿಣಾಮಕಾರಿ ಔಷಧಗಳನ್ನು ಈ ಜನೌಷಧಿ ಕೇಂದ್ರಗಳಲ್ಲಿ ಜನರು ಅತ್ಯಂತ ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.
ಪಾವಗಡ ತಾಲ್ಲೂಕಿನ ಹೋಬಳಿಗಳಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಜನೌಷಧಿ ಕೇಂದ್ರಗಳನ್ನು ತೆರೆಯಲು ಅಗತ್ಯವಿರುವ ಮುಂಗಡ ಔಷಧ ಹಾಗೂ ಒಳಾಂಗಣ ವಿನ್ಯಾಸಕ್ಕೆ ಬೇಕಾಗಿರುವ ಹಣವನ್ನೂ ಭಾರತ ಸರಕಾರದ ವಹಿಸಿಕೊಳ್ಳಲಿದೆ ಎಂದು ಘೋಷಿಸಿದರು.
ಪಾವಗಡ ತಾಲ್ಲೂಕಿನ ಕುಡಿಯುವ ನೀರಿನ ಬಹಳ ಸಮಸ್ಯೆಯಿರುವುದನ್ನ ಸ್ವಾಮೀಜಿವರು ಗಮನಕ್ಕೆ ತಂದರು. ಈ ಸಮಸ್ಯೆಯ ನಿವಾರಣೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯದಿಂದ ಒಂದು ಯೋಜನೆಯನ್ನು ಪ್ರಾರಂಭಿಸುವ ಭರವಸೆಯನ್ನು ಸಚಿವ ಅನಂತಕುಮಾರ್ ನೀಡಿದರು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೆ, ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಅವರನ್ನು ಸ್ಥಳ ಪರಿವೀಕ್ಷಣೆಗೆ ಕಳುಹಿಸಿಕೊಡುವುದಾಗಿ ಹೇಳಿದರು.
5 ಜನೌಷಧಿ ಕೇಂದ್ರಗಳ ಪ್ರಾರಂಭಕ್ಕೆ ಬೇಕಾಗಿರುವ ಒಪ್ಪಂದವನ್ನು ಒಂದು ತಿಂಗಳ ಒಳಗಾಗಿ ಶ್ರೀ ರಾಮಕೃಷ್ಣ ಸೇವಾಶ್ರಮದ ಜೊತೆಯಲ್ಲಿ ಮಾಡಿಕೊಳ್ಳುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು, ಬೈಲೂರು ಮಠದ ಶ್ರೀಮತ್ ವಿನಾಯಕಾನಂದಜೀ ಮಹರಾಜ್ ಸ್ವಾಮೀಜಿ, ನ್ಯಾಯಮೂರ್ತಿ ಶ್ರೀ ಎಂ ಎನ್ ವೆಂಕಟಾಚಲಯ್ಯ, ಶಾಸಕ ಎಲ್ ಎ ರವಿಸುಬ್ರಮಣ್ಯ, ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಜೀಯವರು ಪಾಲ್ಗೊಂಡಿದ್ದರು.
Related Articles
Thank you for your comment. It is awaiting moderation.
Comments (0)