ಕರ್ನಾಟಕದ ಕಣಕಣದಲ್ಲೂ ಅಟಲ್ ಜೀ ಇದ್ದಾರೆ:ಕೇಂದ್ರ ಸಚಿವ ಅನಂತ್ ಕುಮಾರ್

ಮಂಡ್ಯ: ಕರ್ನಾಟಕದ ಕಣಕಣದಲ್ಲೂ ಅಟಲ್ ಬಿಹಾರಿ ವಾಜಪೇಯಿ ಜೀ ಇದ್ದಾರೆ ಮತ್ತು ಅಟಲ್ ಜೀ ಅವರ ಕಣಕಣದಲ್ಲೂ ಕರ್ನಾಟಕವಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ.

ಕಾವೇರಿ ನದಿಗೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿಯನ್ನು ವಿಸರ್ಜಿಸಿ ಮಾತನಾಡಿದ ಅವರು ಕರ್ನಾಟಕದೊಂದಿಗಿನ ಅವರ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು.

ಅಟಲ್ ಬಿಹಾರಿ ವಾಜಪೇಯಿಯವರು ನೂರಾರು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಮಾಡಿದ್ದಾರೆ. ದಶಕಗಳ ಕಾಲ ಲಕ್ಷಾಂತರ ಜನರನ್ನು ತಮ್ಮ ಪ್ರೇರಣಾ ಭರಿತ ಮಾತುಗಳಿಂದ ಸಂಭೋಧಿಸಿ ಉದ್ದೀಪನಗೊಳಿಸಿದ್ದಾರೆ ಎಂದು ಕರ್ನಾಟಕದೊಂದಿಗಿನ ಅವರ ನಂಟನ್ನು ಕೇಂದ್ರ ಸಚಿವ ಅನಂತಕುಮಾರ್ ಮೇಲುಕುಹಾಕಿದರು. ವಿಶ್ವಮಾನ್ಯರಾಗಿರುವ ಅವರ ಸಮಾನತೆ, ಸಮಾಜಿಕ ನ್ಯಾಯ ಮತ್ತು ಅವರ ಜೀವನ ವಿಚಾರ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿರುತ್ತದೆ ಎಂದರು.

ವಿಶ್ವ ಚೇತನ, ಅಜಾತ ಶತ್ರು, ವಿಶ್ವ ಮಾನ್ಯ, ಪಕ್ಷಾತೀತ, ಜಾತ್ಯತೀತ, ಅಟಲ್ ಜೀಯವರ ಅಸ್ಥಿಯನ್ನು ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಲಾಗಿದೆ ಎಂದರು. ನಾಳೆಯೂ ಸಹ ವಿವಿಧ ಬಿಜೆಪಿ ಮುಖಂಡರುಗಳು ರಾಜ್ಯದ ಎಂಟು ನದಿಗಳಲ್ಲಿ ಅಂದರೆ ನೇತ್ರಾವತಿ, ತುಂಗಭದ್ರ, ಮಲಪ್ರಭಾ, ಕೃಷ್ಣಾ ನದಿಗಳಲ್ಲಿ ಅಸ್ಥಿ ವಿಸರ್ಜಿಸಲಿದ್ದಾರೆ ಎಂದರು.

ಉತ್ತರ ಮತ್ತು ದಕ್ಷಿಣದ ನದಿಗಳ ಜೋಡಣೆ ಅಟಲ್ ಜೀ ಅವರ ಕನಸಾಗಿತ್ತು. ಕಾವೇರಿ ಮತ್ತು ಗಂಗಾ ಸೇರಿದಂತೆ 36 ನದಿಗಳನ್ನು ಜೋಡಿಸುವ ಕನಸನ್ನು ಹೊಂದಿದ್ದರು. ಈ ಮೂಲಕ ಇಡೀ ದೇಶದ ರೈತರಿಗೆ ಸುಜಲಾಂ ಸುಫಲಾಂ ಸಾಧಿಸುವ ಸಂಕಲ್ಪ ಹೊಂದಿದ್ದರು ಎಂದು ಅಟಲ್ ಜೀ ಅವರ ಯೋಜನೆಗಳನ್ನ ಅನಂತಕುಮಾರ್ ಸ್ಮರಿಸಿದರು.

ಈ ವೇಳೆ ಅಸ್ಥಿ ಕಳಸ ಯಾತ್ರೆ ಯುದ್ದಕ್ಕೂ ಅಟಲ್ ಜೀ ಅಮರವಾಗಲೀ ಮತ್ತು ಚಿರಾಯುವಾಗಲಿ ಎಂಬ ಘೋಷಣೆಯ ಮೂಲಕ ಸಾವಿರಾರು ಜನರು ಶ್ರದ್ಧಾಂಜಲಿಯನ್ನು ಮತ್ತು ಪುಷ್ಪಾಂಜಲಿ ಅರ್ಪಿಸಿದರು. ಅಟಲ್ ಜೀ ಅವರ ಬಗೆಗಿನ ಜನರ ಅಭಿಮಾನಕ್ಕೆ ಕೇಂದ್ರ ಸಚಿವರು ಗದ್ಗದಿತರಾಗಿ ಭಾವಂಜಲಿಯನ್ನು ಅರ್ಪಿಸಿದರು.

Related Articles

Comments (0)

Leave a Comment