ತುಳುನಾಡಿನ ಇತಿಹಾಸದ ದಾಖಲೀಕರಣ ಅಗತ್ಯ: ಡಾ. ತುಕರಾಮ ಪೂಜಾರಿ

ಮಂಗಳೂರು: ತುಳುನಾಡಿನ ಇತಿಹಾಸದಲ್ಲಿ ಆಳುಪರ ಆಡಳಿತದ ಅವಧಿಯಲ್ಲಿ ದಂಡನಾಯಕರಾಗಿ ಮುಂಚೂಣಿಯಲ್ಲಿದ್ದ ಕೆಲ್ಲ ಪುತ್ತಿಗೆಯ ಕೆಲ್ಲ ವಂಶಸ್ಥರ ಸಾಧನೆಗಳನ್ನು ದಾಖಲಿಸಿರುವುದು ಮಹತ್ವದ ಕಾರ್ಯ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಇತಿಹಾಸ ತಜ್ಞ ಡಾ. ಪಿ.ಎನ್. ನರಸಿಂಹಮೂರ್ತಿ ರಚನೆಯ ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಕೃತಿಯನ್ನು ತುಳು ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತುಳುನಾಡು ಎಂದರೆ ಕೇವಲ ಆಚರಣೆ ಮತ್ತು ಆರಾಧನೆಗೆ ಸೀಮಿತವಲ್ಲ. ಇಲ್ಲಿನ ಇತಿಹಾಸವನ್ನು ತಿಳಿಯುವ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಡೆಯಬೇಕು. ಇನ್ನೂ ಬೆಳಕಿಗೆ ಬಾರದ ತುಳುನಾಡಿನ ಇತಿಹಾಸದ ಅಧ್ಯಯನ ಹಾಗೂ ದಾಖಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕೃತಿಕಾರ ಡಾ. ಪಿ.ಎನ್. ನರಸಿಂಹಮೂರ್ತಿ ಮಾತನಾಡಿ, ನಮ್ಮ ಊರಿನ ಚರಿತ್ರೆಯನ್ನು ಅರಿತುಕೊಳ್ಳುವುದೇ ನಾಡಿಗೆ ಸಲ್ಲಿಸುವ ನಿಜವಾದ ಗೌರವ. ಈ ಕೃತಿ ರಚನೆಗಾಗಿ 35 ವರ್ಷಗಳ ಕಾಲ ಶಾಸನಗಳ ಅಧ್ಯಯನ ಹಾಗೂ ಕ್ಷೇತ್ರ ಅಧ್ಯಯನ ನಡೆಸಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ಕೃತಿಕಾರ ಡಾ. ಪಿ.ಎನ್. ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಜೆ.ಆರ್. ಲೋಬೊ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಲ್ಲ ವಂಶಸ್ಥರ ಪ್ರತಿನಿಧಿ ಕೆ.ಪಿ. ಜಗದೀಶ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹಾಗೂ ಉಡಲ್ ತುಳು ಪತ್ರಿಕೆಯ ಸಂಪಾದಕಿ ಜಯಂತಿ ಎಸ್. ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತುಳು ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Comments (0)