ಜನರ ಸಂಕಷ್ಟಕ್ಕಿಂತ ಕಾಂಗ್ರೆಸ್ ಸರ್ಕಾರಕ್ಕೆ ಪ್ರಚಾರವೇ ಮುಖ್ಯ: ಡಾ. ಸಿ.ಟಿ. ರವಿ
- by Suddi Loka
- November 15, 2026
- 8 Views
ಬೆಂಗಳೂರು: ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಕಾಂಗ್ರೆಸ್ ಸರ್ಕಾರಕ್ಕೆ ಜಾಹೀರಾತು ಮತ್ತು ಪ್ರಚಾರವೇ ಮುಖ್ಯವಾಗಿದೆ. ಜಾಹೀರಾತಿಗಾಗಿ ಸುಮಾರು ₹500 ಕೋಟಿ ಖರ್ಚು ಮಾಡುವ ಸರ್ಕಾರ, ಫಲಾನುಭವಿಗಳಿಗೆ ಪಿಂಚಣಿ ಮತ್ತು ಗೌರವಧನ ನೀಡಲು ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸುಮಾರು 23 ಲಕ್ಷ ಫಲಾನುಭವಿಗಳಿಗೆ ಎಂಟು ತಿಂಗಳಿಂದ ಗೌರವಧನ ಪಾವತಿಯಾಗಿಲ್ಲ. ರೈತರಿಗೆ ರಾಗಿ ಖರೀದಿ ಹಣ ಬಿಡುಗಡೆ ಮಾಡಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಾದ ₹900 ಕೋಟಿ ಸಬ್ಸಿಡಿ ಬಾಕಿಯಿದೆ. ವಿದ್ಯುತ್ ಬಿಲ್ಗಳನ್ನೂ ಪಾವತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಬರಗಾಲದ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಸಂಭ್ರಮಾಚರಣೆಗಳಲ್ಲಿ ತೊಡಗಿದೆ. ಯಾವ ಸಂದರ್ಭದಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ಅರಿವು ಸರ್ಕಾರಕ್ಕೆ ಇರಬೇಕು ಎಂದು ಟೀಕಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡಲು ಎಸ್ಐಆರ್ ನೆಪ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಹಿರಿಯೂರು ಉಪಚುನಾವಣೆಯ ಸಿದ್ಧತೆ ಕುರಿತು ಚರ್ಚಿಸಿದ್ದಾರೆ ಎಂದರು. ಮುಂದಿನ 14ರಿಂದ 16 ತಿಂಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಕಾರ್ಯತಂತ್ರ ರೂಪಿಸಲಾಗುವುದು. ಕ್ಷೇತ್ರಗಳಲ್ಲಿನ ಗೆಲುವಿನ ಅವಕಾಶ ಆಧರಿಸಿ ಎರಡೂ ಪಕ್ಷಗಳು ಪರಸ್ಪರ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿವೆ ಎಂದು ತಿಳಿಸಿದರು.
ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಚಾರ್ಜ್ಶೀಟ್ ಬಿಡುಗಡೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಎಸ್ಐಆರ್ ಕುರಿತು ಕಾಂಗ್ರೆಸ್ ತಪ್ಪು ಪ್ರಚಾರ ಮಾಡುತ್ತಿದೆ. ಅರ್ಹ ಮತದಾರರ ಹೆಸರು ಕೈಬಿಟ್ಟಿದ್ದರೆ ಆಕ್ಷೇಪ ಸಲ್ಲಿಸಬಹುದಿತ್ತು ಎಂದು ಹೇಳಿದರು.
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರವಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮತ್ತು ಗ್ರಾಮೀಣ ರಸ್ತೆ ಯೋಜನೆಗಳಲ್ಲಿ ಕೇಂದ್ರದ ಕೊಡುಗೆ ಮಹತ್ವದ್ದಾಗಿದೆ ಎಂದು ಡಾ. ರವಿ ಹೇಳಿದರು.


Comments (0)