ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಯುಪಿಎ ಅವಧಿಯಲ್ಲೇ ಅಡಿಪಾಯ; ರಾಜ್ಯದ ಪಾಲೇ ಸಿಂಹಪಾಲು: ರಾಮಲಿಂಗಾರೆಡ್ಡಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ನವೆಂಬರ್ 13ರಂದು ಉದ್ಘಾಟನೆಯಾಗುತ್ತಿರುವ ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗದ (Pink Line) ಮೊದಲ ಹಂತದ ಕಾರ್ಯಾಚರಣೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ವಾಗತಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಈ ಮಾರ್ಗವು ದಕ್ಷಿಣ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ವೇಗ ನೀಡಲಿದೆ ಎಂದಿದ್ದಾರೆ.

ಯುಪಿಎ ಸರ್ಕಾರದ ಕೊಡುಗೆ ಸ್ಮರಣೆ:

2013-14ರಲ್ಲಿ ತಾವು ಸಾರಿಗೆ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯನ್ನು ಸ್ಮರಿಸಿರುವ ಸಚಿವರು, 2014ರ ಜನವರಿ 30ರಂದು ಅಂದಿನ ಯುಪಿಎ ಸರ್ಕಾರದ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋ 2ನೇ ಹಂತಕ್ಕೆ ಅನುಮೋದನೆ ನೀಡಿತ್ತು. ಗೊಟ್ಟಿಗೆರೆ-ನಾಗವಾರ ಮಾರ್ಗವೂ ಅದರ ಭಾಗವಾಗಿದ್ದು, ಅದೇ ಇಂದು ಗುಲಾಬಿ ಮಾರ್ಗವಾಗಿ ರೂಪುಗೊಂಡಿದೆ. ಮೆಟ್ರೋ ಬೆಳವಣಿಗೆಗೆ ಯುಪಿಎ ಹಾಕಿಕೊಟ್ಟ ಅಡಿಪಾಯ ಹಾಗೂ ವಿವಿಧ ಸರ್ಕಾರಗಳ ನಿರಂತರ ಪ್ರಯತ್ನವನ್ನು ಮರೆಯಬಾರದು ಎಂದು ಅವರು ತಿಳಿಸಿದ್ದಾರೆ.

ವೆಚ್ಚದಲ್ಲಿ ರಾಜ್ಯ ಸರ್ಕಾರದ ಸಿಂಹಪಾಲು:

ಗುಲಾಬಿ ಮಾರ್ಗ (21.26 ಕಿ.ಮೀ.) ಮತ್ತು ಒಟ್ಟಾರೆ ಮೆಟ್ರೋ ಯೋಜನೆಗಳ ಆರ್ಥಿಕ ವೆಚ್ಚದ ವಿವರಗಳನ್ನು ಸಚಿವರು ಹಂಚಿಕೊಂಡಿದ್ದಾರೆ:

ಗುಲಾಬಿ ಮಾರ್ಗದ ವೆಚ್ಚ: ₹8,730 ಕೋಟಿ ಮೂಲ ಅಂದಾಜಿನ ಈ ಯೋಜನೆಯ ಪರಿಷ್ಕೃತ ವೆಚ್ಚ ₹17,346 ಕೋಟಿಗೆ ತಲುಪಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸುಮಾರು ₹12,000 ಕೋಟಿಯಷ್ಟಿದೆ.

ಒಟ್ಟಾರೆ ಮೆಟ್ರೋ ಹಂತಗಳ ವೆಚ್ಚ: ಮೆಟ್ರೋದ 1, 2, 2A, 2B ಹಾಗೂ 3ನೇ ಹಂತಗಳ ಒಟ್ಟು ₹77,891 ಕೋಟಿ ಯೋಜನಾ ವೆಚ್ಚದಲ್ಲಿ ಕರ್ನಾಟಕ ಸರ್ಕಾರ ₹65,291 ಕೋಟಿ (ಶೇ. 83.8) ಭರಿಸುತ್ತಿದ್ದರೆ, ಕೇಂದ್ರ ಸರ್ಕಾರದ ಕೊಡುಗೆ ₹12,600 ಕೋಟಿ (ಶೇ. 16.2) ಆಗಿದೆ.

ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಬದ್ಧತೆಯ ಪ್ರತೀಕವಾಗಿದೆ. ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ಕೊಡುಗೆಗೆ ತಕ್ಕ ಗೌರವ ಮತ್ತು ಮನ್ನಣೆ ದೊರೆಯಬೇಕು ಎಂದು ರಾಮಲಿಂಗಾರೆಡ್ಡಿ ಆಶಿಸಿದ್ದಾರೆ.

 

 

Related Articles

Comments (0)

Leave a Comment