ಕಬ್ಬಿಗೆ ₹3,600 ದರ ನಿಗದಿ ರೈತರಿಗೆ ಮಾಡಿದ ದ್ರೋಹ: ಕರ್ನಾಟಕ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಕುರುಬೂರು ಶಾಂತಕುಮಾರ್
- by Suddi Loka
- November 5, 2026
- 4 Views
ಮೈಸೂರು: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ನಡೆಸುತ್ತಿದ್ದ ರೈತರ ಬಂಧನ ಖಂಡನೀಯ. ಬಂಧಿತ ರೈತರನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಪ್ರತಿ ಟನ್ಗೆ ₹3,600 ದರ ನಿಗದಿಪಡಿಸಿರುವುದನ್ನು ರೈತರು ಒಪ್ಪುವುದಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಸರ್ಕಾರ ರೈತರ ಹೋರಾಟವನ್ನು ದಿಕ್ಕು ತಪ್ಪಿಸಲು ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ರೈತರು ಪ್ರತಿ ಟನ್ಗೆ ₹4,500 ದರಕ್ಕೆ ಬೇಡಿಕೆ ಇಟ್ಟಿರುವಾಗ ಕೇವಲ ಎಫ್ಆರ್ಪಿ ದರಕ್ಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಜಿಲ್ಲೆಯ 29 ಸಕ್ಕರೆ ಕಾರ್ಖಾನೆಗಳ ಪೈಕಿ 16 ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಶೇ.12ಕ್ಕಿಂತ ಹೆಚ್ಚಿದೆ. ಈ ಕಾರ್ಖಾನೆಗಳ ಲೆಕ್ಕಾಚಾರದ ಪ್ರಕಾರ ರೈತರಿಗೆ ಪ್ರತಿ ಟನ್ಗೆ ₹4,350 ಎಫ್ಆರ್ಪಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ನಡೆದ ದರ ನಿಗದಿ ಪ್ರಕ್ರಿಯೆಯನ್ನೂ ಟೀಕಿಸಿದ್ದಾರೆ.
ಕಬ್ಬಿಗೆ ರಾಜ್ಯ ಸರ್ಕಾರ ಎಸ್ಎಪಿ ದರ ನಿಗದಿಪಡಿಸಬೇಕು, ಕೇಂದ್ರ ಸರ್ಕಾರ ಎಫ್ಆರ್ಪಿ ಹೆಚ್ಚಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಬರಪೀಡಿತ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರೈತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.


Comments (0)