ಅಮೆರಿಕ ಸೆನೆಟ್ಗೆ ಆಯ್ಕೆಯಾದ ಅಬ್ದುಲ್ ಎಲ್-ಸಯೀದ್ಗೆ ಭಟ್ಕಳ ನಂಟು
- by Suddi Loka
- November 5, 2026
- 137 Views
ಮಿಚಿಗನ್: ಅಮೆರಿಕದ ಮಿಚಿಗನ್ ರಾಜ್ಯದಿಂದ ಸೆನೆಟ್ಗೆ ಆಯ್ಕೆಯಾಗಿರುವ ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಎಲ್-ಸಯೀದ್ ಅವರಿಗೆ ಕರಾವಳಿ ಕರ್ನಾಟಕದ ನಂಟಿದೆ. ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಕುಟುಂಬದ ಮೂಲ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ.
ಭಟ್ಕಳ ಮೂಲದ ಮೂತ್ರಪಿಂಡ ತಜ್ಞ ಡಾ. ತಯೆಬ್ ಜುಕಾಕು ಅವರ ಪುತ್ರಿ ಸಾರಾ, ನವೇಯತ್ ಮುಸ್ಲಿಂ ವ್ಯಾಪಾರಿ ಸಮುದಾಯಕ್ಕೆ ಸೇರಿದವರು. ಅವರ ಅಜ್ಜ ಜೆ.ಎಚ್. ಶಮ್ಸುದ್ದೀನ್ ಜುಕಾಕು ಮೈಸೂರು ಸಂಸ್ಥಾನದ ಉಪ ಹಣಕಾಸು ಸಚಿವರಾಗಿದ್ದರು. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಪರಿಚಯವಾದ ಎಲ್-ಸಯೀದ್ ಮತ್ತು ಸಾರಾ 2006ರಲ್ಲಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.

42 ವರ್ಷದ ವೈದ್ಯ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮಾಜಿ ಅಧಿಕಾರಿ ಎಲ್-ಸಯೀದ್, ಮಾಜಿ ಸಂಸದ ಮೈಕ್ ರೋಜರ್ಸ್ ವಿರುದ್ಧ ಶೇ.52ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದಾರೆ. ನಿವೃತ್ತಿಯಾಗುತ್ತಿರುವ ಸೆನೆಟರ್ ಗ್ಯಾರಿ ಪೀಟರ್ಸ್ ಅವರ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ.
2015ರಲ್ಲಿ ಡೆಟ್ರಾಯಿಟ್ ನಗರದ ಆರೋಗ್ಯ ನಿರ್ದೇಶಕರಾಗಿದ್ದ ಅವರು, ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣೆ ಮತ್ತು ಶಾಲೆಗಳಿಂದ ಸೀಸದ ಅಂಶ ತೆರವು ಸೇರಿದಂತೆ ಹಲವು ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. 2018ರ ಮಿಚಿಗನ್ ಗವರ್ನರ್ ಚುನಾವಣೆಯ ಡೆಮಾಕ್ರಟಿಕ್ ಪ್ರೈಮರಿಯಲ್ಲಿ ಗ್ರೆಚನ್ ವಿಟ್ಮರ್ ವಿರುದ್ಧ ಸೋತಿದ್ದರು.

ಮೆಡಿಕೇರ್ ಫಾರ್ ಆಲ್ ಯೋಜನೆ ಅವರ ಪ್ರಮುಖ ಚುನಾವಣಾ ಭರವಸೆಯಾಗಿದೆ. ಗಾಜಾ ಯುದ್ಧವನ್ನು ನರಮೇಧ ಎಂದು ಬಣ್ಣಿಸಿರುವ ಅವರು, ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.


Comments (0)