ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆಗೆ ಪ್ರಧಾನಿ ಮೋದಿಗೆ ಸಿಎಂ ವಿಜಯ್ ಪತ್ರ
- by Suddi Loka
- November 5, 2026
- 6 Views
ಚೆನ್ನೈ: ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ನ ಪೀಠ ಸ್ಥಾಪಿಸುವ ದಶಕಗಳ ಬೇಡಿಕೆಯನ್ನು ಮರುಪರಿಶೀಲಿಸುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಹೊಸದಾಗಿ ಚರ್ಚೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
1980ರಿಂದಲೂ ತಮಿಳುನಾಡಿನಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆಗೆ ಬೇಡಿಕೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ವಿಜಯ್, ದಕ್ಷಿಣ ಭಾರತದ ಕಕ್ಷಿದಾರರು ನ್ಯಾಯಕ್ಕಾಗಿ ನವದೆಹಲಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಚೆನ್ನೈನಲ್ಲಿ ಪೀಠ ಸ್ಥಾಪನೆಯಾದರೆ ತಮಿಳುನಾಡು ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಅನುಕೂಲವಾಗಲಿದೆ. ನ್ಯಾಯಾಂಗ ಸೇವೆಯನ್ನು ವಿಕೇಂದ್ರೀಕರಣಗೊಳಿಸುವುದು ದೇಶದ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಅನುಗುಣವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಂವಿಧಾನದ 130ನೇ ವಿಧಿಯನ್ನು ಉಲ್ಲೇಖಿಸಿರುವ ವಿಜಯ್, ಈ ಸಂಬಂಧ ಸಂಸದೀಯ ಸ್ಥಾಯಿ ಸಮಿತಿಗಳ ಶಿಫಾರಸುಗಳು ಮತ್ತು ಕಾನೂನು ಆಯೋಗದ ವರದಿಗಳನ್ನು ಪರಿಗಣಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ಹಿಂದಿನ ನಿಲುವನ್ನು ಮರುಪರಿಶೀಲಿಸುವಂತೆ ಹೊಸದಾಗಿ ಚರ್ಚೆ ಆರಂಭಿಸಲು ಪ್ರಧಾನಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.


Comments (0)