ಮೈತ್ರಿ ಸರ್ಕಾರದ ಭವಿಷ್ಯ ಕುರಿತ ಸಿದ್ದು ಮಾತನ್ನು ಸಮರ್ಥಿಸಿಕೊಳ್ಳ ಬೇಡಿ: ಸಚಿವರಿಗೆ ಪರಂ ತಾಕೀತು
- by Suddi Team
 - June 28, 2018
 - 320 Views
 
ಬೆಂಗಳೂರು: ಮೈತ್ರಿ ಸರ್ಕಾರದ ಭವಿಷ್ಯ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಆಡಿರುವ ಮಾತುಗಳನ್ನು ಸಮರ್ಥಿಸಿಕೊಳ್ಳದಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಚಿವರಿಗೆ ಸೂಚನೆ ನೀಡಿದ್ದಾರೆ.
ಮೈತ್ರಿ ಸರ್ಕಾರದ ಭವಿಷ್ಯ ಕುರಿತು ಮಾಜಿ ಸಿಎಂ ಮಾತನಾಡಿರುವ ವಿಡಿಯೋ ಬಹಿರಂಗ ಮತ್ತು ನಿನ್ನೆ ಸಿದ್ಧರಾಮಯ್ಯ ಜೊತೆ ಸಚಿವರು ಸಭೆ ನಡೆಸಿರುವ ಬೆನ್ನಲ್ಲೇ ಇಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಚಿವರ ಸಭೆ ನಡೆಸಿದರು. ಸಭೆಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಪುಟ್ಟರಂಗ ಶೆಟ್ಟಿ, ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ಶಿವಾನಂದ್ ಪಾಟೀಲ್, ಶಂಕರ್, ರಾಜಶೇಖರ ಪಾಟೀಲ್ ಹುಮ್ನಾಬಾದ್, ವೆಂಕಟ ರಮಣಪ್ಪ, ಜಯಮಾಲ, ರಮೇಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಶಿವಶಂಕರ್ ರೆಡ್ಡಿ, ಕೆ ಜೆ ಜಾರ್ಜ್ ಸೇರಿದಂತೆ ಒಟ್ಟು ಹದಿನಾರು ಜನ ಕಾಂಗ್ರೆಸ್ ಸಚಿವರು ಭಾಗಿಯಾಗಿದ್ದರು.
ಶಾಂತಿವನದಲ್ಲಿ ಕೂತು ಸಿದ್ದರಾಮಯ್ಯ ಮಾತನಾಡಿದ್ದು ಹಾಗೂ ಬಜೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಸೇರಿದಂತೆ ಕಳೆದ ಒಂದು ವಾರದಿಂದ ಕಾಂಗ್ರೆಸ್ ನಾಯಕರು ಕೊಟ್ಟ ಹೇಳಿಕೆಗಳನ್ನ ಪರಮೇಶ್ವರ್ ಸಚಿವರ ಗಮನಕ್ಕೆ ತಂದು, ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ನಮಗೂ ಅನಿವಾರ್ಯವಿದೆ. ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರದ ದೃಷ್ಟಿಯಿಂದ ಈ ಮೈತ್ರಿ ಮಾಡಿಕೊಂಡಿದ್ದು ಹೀಗಾಗಿ ಜೆಡಿಎಸ್ ಗಿಂತ ಈ ಮೈತ್ರಿ ಕಾಂಗ್ರೆಸ್ ಗೆ ಅನಿವಾರ್ಯವಾಗಿದೆ. ಅತ್ತ ಬಿಜೆಪಿ ನಾಯಕರು ಕಾದು ಕೂತಿದ್ದಾರೆ. ಆದ್ರೂ, ನಮ್ಮ ನಾಯಕರು ಈ ರೀತಿ ಹೇಳಿಕೆ ಕೊಡುವುದನ್ನ ಬಿಡುತ್ತಿಲ್ಲ ಎಂದಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಧಿವೇಶನ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ. ಹೀಗಾಗಿ ನಾವು ಒಟ್ಟಾಗಿ ಇರಬೇಕು. ಯಾರು ಸಹ ಸಿದ್ದರಾಮಯ್ಯರ ಹೇಳಿಕೆ ಸಮರ್ಥಿಸಿಕೊಳ್ಳ ಬೇಡಿ ಎಂದು ಸಭೆಯಲ್ಲಿ ಪರಮೇಶ್ವರ್ ಸಚಿವರಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದಷ್ಟು ಮಾಧ್ಯಮಗಳ ಜೊತೆ ಅಂತರ ಕಾಯ್ದುಕೊಳ್ಳಿ. ರಾಜಕೀಯದ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ. ಇಲಾಖಾವಾರು ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ, ಸಿದ್ದರಾಮಯ್ಯನವರು ನಮ್ಮ ನಾಯಕರು. ಅವರಿಗೆ ನಾವೆಲ್ಲರೂ ಗೌರವಕೊಡಬೇಕು. ಅವರನ್ನ ನಾನೂ ಭೇಟಿ ಮಾಡಿ ಮಾತನಾಡಿದ್ದೇನೆ, ಹಾಗೇ ನೀವು ಹೋಗಿದ್ದೀರಿ ಅದರಲ್ಲಿ ತಪ್ಪೇನಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ವ್ಯಾಪ್ತಿಯ ಶಾಸಕರ ಜೊತೆ ಸಂಬಂಧ ಸುಧಾರಿಸಿಕೊಳ್ಳಿ. ಕ್ಷೇತ್ರದ ಸಮಸ್ಯೆಗಳಿದ್ದರೆ ಅದನ್ನ ಬಗೆಹರಿಸಿಕೊಡಿ ಎಂದು ಪರಮೇಶ್ವರ್ ಸಚಿವರಿಗೆ ಸಲಹೆ ನೀಡಿದ್ದಾರೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)