“ನಾನೂ ಏಳೆಂಟು ಟೌನ್‌ಶಿಪ್ ಮಾಡಿದ್ದೆ..”: ಡಿ.ಕೆ.ಶಿವಕುಮಾರ್‌ಗೆ ಪ್ರಧಾನಿ ಮೋದಿ ಕೊಟ್ಟ ಆ ‘ಒಂದು’ ಸಲಹೆ ಏನು?

ಬೆಂಗಳೂರು: ವಿವಾದಿತ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ಮುಂಚೂಣಿಗೆ ಬಂದಿವೆ. ಯೋಜನೆಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿಲುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಯವಾಗಿಯೇ ತಿರುಗೇಟು ನೀಡಿದ್ದಾರೆ. ಅದರೊಂದಿಗೆ, ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಪ್ರಧಾನಿ ಮೋದಿ ನೀಡಿದ ಕಿವಿಮಾತು ಏನು?

ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದ ವಿವರಗಳನ್ನು ಹಂಚಿಕೊಂಡ ಡಿ.ಕೆ. ಶಿವಕುಮಾರ್, ಬಿಡದಿ ಟೌನ್‌ಶಿಪ್ ಕುರಿತು ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಭೇಟಿಯ ವೇಳೆ ಪ್ರಧಾನಿ ಮೋದಿ ಅವರು, “ನಾನು ಕೂಡ ಈ ಹಿಂದೆ ಏಳೆಂಟು ಟೌನ್‌ಶಿಪ್‌ಗಳನ್ನು ಯಶಸ್ವಿಯಾಗಿ ಮಾಡಿದ್ದೆ. ನೀವು ಈಗ ಕೈಗೆತ್ತಿಕೊಂಡಿರುವುದು ಒಳ್ಳೆಯ ಕೆಲಸ. ಇದರಿಂದ ಬೆಂಗಳೂರಿನ ಮೇಲಿರುವ ಭಾರಿ ಜನಸಂಖ್ಯೆಯ ಒತ್ತಡ ಕಡಿಮೆಯಾಗಲಿದೆ” ಎಂದು ತಮಗೆ ಕಿವಿಮಾತು ಹಾಗೂ ಪ್ರೋತ್ಸಾಹ ನೀಡಿದ್ದಾರೆ ಎಂದು ಡಿಕೆಶಿ ಮಾಹಿತಿ ನೀಡಿದರು. ಪ್ರಧಾನಿಯವರ ಈ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಮುಂದುವರಿಸಲಾಗುವುದು ಎಂದಿದ್ದಾರೆ.

ಕುಮಾರಸ್ವಾಮಿ ಮಾರ್ಗದರ್ಶನದಲ್ಲೇ ಯೋಜನೆ:

ಇದೇ ವೇಳೆ ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿರುವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಕಾನೂನು ಹೋರಾಟ ಮಾಡಲು ಹೊರಟಿರುವ ಅವರಿಗೆ ನನ್ನ ಕಡೆಯಿಂದ ಶುಭ ಹಾರೈಕೆಗಳು. ಆದರೆ, ವಾಸ್ತವದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಹಳೆಯ ಮಾರ್ಗದರ್ಶನ ಹಾಗೂ ಆಲೋಚನೆಗಳ ಅಡಿಯಲ್ಲೇ ಈ ಟೌನ್‌ಶಿಪ್ ಯೋಜನೆ ಸಾಕಾರಗೊಳ್ಳುತ್ತಿದೆ” ಎಂದು ನೆನಪಿಸಿದರು.

ರೈತರ ಪ್ರತಿಭಟನೆ ಹಾಗೂ ರಾಜಕೀಯ ನಾಯಕರ ಪರ-ವಿರೋಧದ ನಡುವೆಯೂ, ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದ ನಾಯಕತ್ವದಿಂದಲೇ ಬೆಂಬಲ ಸಿಕ್ಕಿದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿರುವುದು ಕಮಲ ಮತ್ತು ಕದನ ಕುತೂಹಲವನ್ನು ಇನ್ನು ಹೆಚ್ಚಿಸಿದೆ.

 

Related Articles

Comments (0)

Leave a Comment