‘ಆಪರೇಷನ್ ಗಜ’: ಮಾನವ–ಆನೆ ಸಂಘರ್ಷ ತಡೆಗೆ ವೈಜ್ಞಾನಿಕ ಕಾರ್ಯಾಚರಣೆ
- by Suddi Loka
- November 24, 2026
- 6 Views
ಬೆಂಗಳೂರು: ಹಾಸನ–ಬೇಲೂರು–ಮೂಡಿಗೆರೆ–ಚಿಕ್ಕಮಗಳೂರು ಭಾಗದಲ್ಲಿ ಮಾನವ–ಆನೆ ಸಂಘರ್ಷವನ್ನು ತಡೆಗಟ್ಟಲು ಕರ್ನಾಟಕ ಅರಣ್ಯ ಇಲಾಖೆಯು ‘ಆಪರೇಷನ್ ಗಜ’ ಹೆಸರಿನಲ್ಲಿ ಸಮಗ್ರ ಹಾಗೂ ವೈಜ್ಞಾನಿಕ ಕಾರ್ಯಾಚರಣೆ ಕೈಗೊಂಡಿದೆ. ಜನರ ಸುರಕ್ಷತೆಯನ್ನು ಖಾತರಿಪಡಿಸುವುದರ ಜೊತೆಗೆ ಆನೆಗಳ ಯೋಗಕ್ಷೇಮ ಮತ್ತು ಸಂರಕ್ಷಣೆಗೆ ಆದ್ಯತೆ ನೀಡುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಆನೆಗಳನ್ನು ಬಲವಂತವಾಗಿ ಓಡಿಸುವ ಸಾಂಪ್ರದಾಯಿಕ ವಿಧಾನಗಳ ಬದಲಿಗೆ, ಅವುಗಳ 30ರಿಂದ 40 ವರ್ಷಗಳ ಸಂಚಾರದ ದಾಖಲೆಗಳು, ವಲಸೆ ಮಾರ್ಗಗಳು, ಆನೆ ಕಾರಿಡಾರ್ಗಳು, ಆಹಾರ ಮತ್ತು ನೀರಿನ ಲಭ್ಯತೆ, ಆವಾಸಸ್ಥಾನದ ಪರಿಸ್ಥಿತಿಗಳು ಹಾಗೂ ಆನೆಗಳ ವರ್ತನೆಯನ್ನು ಆಧರಿಸಿ ಕಾರ್ಯತಂತ್ರ ರೂಪಿಸಲಾಗಿದೆ.
ಆನೆಗಳಿಗೆ ಜಿಲ್ಲೆ ಅಥವಾ ಆಡಳಿತಾತ್ಮಕ ಗಡಿಗಳ ಅರಿವಿರುವುದಿಲ್ಲ. ಹಾಸನ, ಚಿಕ್ಕಮಗಳೂರು, ಮೂಡಿಗೆರೆ ಮತ್ತು ಸುತ್ತಮುತ್ತಲಿನ ಸಂಪರ್ಕಿತ ಅರಣ್ಯ ಪ್ರದೇಶಗಳಲ್ಲಿ ಅವು ದಶಕಗಳಿಂದ ಸಹಜವಾಗಿ ಸಂಚರಿಸುತ್ತಿವೆ. ಹೀಗಾಗಿ, ಆನೆಗಳನ್ನು ಅಪರಿಚಿತ ಪ್ರದೇಶಗಳಿಗೆ ಬಲವಂತವಾಗಿ ತಳ್ಳುವ ಬದಲು, ಅವುಗಳ ಸಹಜ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.

ಪಟಾಕಿ ಸಿಡಿಸುವುದು, ಕೂಗಾಡುವುದು, ತಮಟೆ ಬಾರಿಸುವುದು ಹಾಗೂ ಅಸಂಘಟಿತವಾಗಿ ಬೆನ್ನಟ್ಟುವ ಪ್ರಯತ್ನಗಳಿಂದ ಆನೆಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡುವ ಸಾಧ್ಯತೆಯಿದೆ. ಇದರಿಂದ ಹಿಂಡುಗಳು ಚದುರಿ, ಜನರು ಮತ್ತು ಆನೆಗಳೆರಡಕ್ಕೂ ಅಪಾಯ ಉಂಟಾಗಬಹುದು. ಆದ್ದರಿಂದ ಕನಿಷ್ಠ ಅಡಚಣೆಯೊಂದಿಗೆ ಸಮನ್ವಯಿತ ಕಾರ್ಯಾಚರಣೆ ನಡೆಸಿ, ಆನೆಗಳು ಸೂಕ್ತ ಅರಣ್ಯ ಆವಾಸಸ್ಥಾನಗಳತ್ತ ಸಹಜವಾಗಿ ಮರಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ.
35 ಆನೆಗಳ ಚಲನವಲನದ ಮೇಲೆ ನಿಗಾ
ನವೆಂಬರ್ 23, 2026ರ ಮಾಹಿತಿ ಪ್ರಕಾರ, ಸುಮಾರು 35 ಆನೆಗಳನ್ನು ಒಳಗೊಂಡ ಎರಡು ಪ್ರಮುಖ ಹಿಂಡುಗಳ ಚಲನವಲನವನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಅವು ತಟ್ಕೋಳ ಮೀಸಲು ಅರಣ್ಯದತ್ತ ಸಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
17 ಆನೆಗಳಿರುವ ಮೊದಲ ಹಿಂಡು ಈ ಹಿಂದೆ ತಟ್ಕೋಳ ಅರಣ್ಯದಿಂದ ಸುಮಾರು 9–10 ಕಿ.ಮೀ ದೂರದಲ್ಲಿತ್ತು. ಇದೀಗ ಅರಣ್ಯದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. 18 ಆನೆಗಳಿರುವ ಎರಡನೇ ಹಿಂಡು ಕೂಡ ಅರಣ್ಯದತ್ತ ಸಾಗುತ್ತಿದ್ದು, ಪ್ರಸ್ತುತ ಸುಮಾರು 6.2 ಕಿ.ಮೀ ದೂರದಲ್ಲಿದೆ.
ಬಿಕ್ಕೋಡು ಭಾಗದ ಆನೆಗಳ ಸಂಚಾರದ ಮೇಲೂ ನಿಗಾ ಇರಿಸಲಾಗಿದೆ. ಅವು ಪಕ್ಕದ ಅರಣ್ಯ ಕಾರಿಡಾರ್ನತ್ತ ಸಹಜವಾಗಿ ಚಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಒಂಟಿ ಗಂಡಾನೆಗಳ ಅನಿರೀಕ್ಷಿತ ಸಂಚಾರದ ಬಗ್ಗೆಯೂ ವಿಶೇಷ ಗಮನ ಹರಿಸಲಾಗಿದೆ. ಆನೆಗಳ ಚಲನವಲನ ನಿರಂತರವಾಗಿ ಬದಲಾಗುವುದರಿಂದ ಸತತ ಮೌಲ್ಯಮಾಪನ ಅಗತ್ಯವಿದೆ ಎಂದು ಇಲಾಖೆ ತಿಳಿಸಿದೆ.
ಬಹು-ಇಲಾಖೆಗಳ ಸಮನ್ವಯದ ಕಾರ್ಯಾಚರಣೆ
‘ಆಪರೇಷನ್ ಗಜ’ದಲ್ಲಿ ಅರಣ್ಯ ಸಿಬ್ಬಂದಿ, ಆನೆ ಕಾರ್ಯಪಡೆಗಳು, ಪಶುವೈದ್ಯಕೀಯ ತಂಡಗಳು, ಅನುಭವಿ ಮಾವುತರು, ತರಬೇತಿ ಪಡೆದ ಕುಮ್ಕಿ ಆನೆಗಳು ಹಾಗೂ ವಿವಿಧ ಅರಣ್ಯ ವಿಭಾಗಗಳ ಮೇಲ್ವಿಚಾರಣಾ ತಂಡಗಳು ಭಾಗವಹಿಸಿವೆ.
ಹಾಸನ, ಚಿಕ್ಕಮಗಳೂರು, ಭದ್ರಾ, ತುಮಕೂರು ಮತ್ತು ನೆರೆಯ ಪ್ರದೇಶಗಳಲ್ಲಿ ಸಂಪನ್ಮೂಲಗಳನ್ನು ಸಮನ್ವಯಗೊಳಿಸಲಾಗುತ್ತಿದ್ದು, ಹೆಚ್ಚುವರಿ ಕಾರ್ಯಾಚರಣಾ ಬೆಂಬಲವನ್ನೂ ಸಜ್ಜುಗೊಳಿಸಲಾಗುತ್ತಿದೆ. ಪೊಲೀಸ್, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಕಾರದೊಂದಿಗೆ 24 ಗಂಟೆಗಳ ಕಣ್ಗಾವಲು, ಕ್ಷೇತ್ರ ಗಸ್ತು, ಡ್ರೋನ್ ಮೂಲಕ ಮೇಲ್ವಿಚಾರಣೆ, ಗ್ರಾಮಮಟ್ಟದ ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ಸಾರ್ವಜನಿಕ ಪ್ರಕಟಣೆಗಳನ್ನು ಬಲಪಡಿಸಲಾಗುತ್ತಿದೆ.
ಆನೆಗಳು ಸಂಚರಿಸಬಹುದಾದ ಮಾರ್ಗಗಳಲ್ಲಿರುವ ಗ್ರಾಮಸ್ಥರಿಗೆ ಮುಂಚಿತವಾಗಿ ಮಾಹಿತಿ ನೀಡುವುದು, ಅಪಾಯದಲ್ಲಿರುವ ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಗಳನ್ನು ರಕ್ಷಿಸುವುದು ಹಾಗೂ ತುರ್ತು ಸ್ಪಂದನೆ ಮತ್ತು ಪಶುವೈದ್ಯಕೀಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಕಾರ್ಯಾಚರಣೆಯ ಭಾಗವಾಗಿದೆ.
ದೀರ್ಘಕಾಲೀನ ಸಂರಕ್ಷಣಾ ಕ್ರಮಗಳ ಪರಿಶೀಲನೆ
ತಕ್ಷಣದ ಸಂಘರ್ಷ ನಿರ್ವಹಣೆಯ ಜತೆಗೆ, ಆನೆಗಳು ಪದೇಪದೇ ಜನವಸತಿ ಪ್ರದೇಶಗಳಿಗೆ ಮರಳುವುದನ್ನು ತಡೆಯುವ ದೀರ್ಘಕಾಲೀನ ಕ್ರಮಗಳ ಬಗ್ಗೆಯೂ ಇಲಾಖೆ ಪರಿಶೀಲನೆ ನಡೆಸುತ್ತಿದೆ. ತಟ್ಕೋಳ ಮೀಸಲು ಅರಣ್ಯ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ ಭದ್ರಾ ಭೂಪ್ರದೇಶವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಆನೆ ನಿರೋಧಕ ಕಂದಕಗಳು, ಸೌರಶಕ್ತಿ ಬೇಲಿಗಳು, ರೈಲ್ವೆ ಬ್ಯಾರಿಕೇಡ್ಗಳು ಹಾಗೂ ಸ್ಥಳಕ್ಕೆ ಸೂಕ್ತವಾದ ಇತರ ರಕ್ಷಣಾ ಕ್ರಮಗಳನ್ನು ಅಳವಡಿಸುವ ಸಾಧ್ಯತೆ ಪರಿಶೀಲನೆಯಲ್ಲಿದೆ. ನೈಸರ್ಗಿಕ ವನ್ಯಜೀವಿ ಕಾರಿಡಾರ್ಗಳ ಸಂಪರ್ಕಕ್ಕೆ ಅನಗತ್ಯ ಅಡ್ಡಿಯಾಗದಂತೆ ಪ್ರತಿಯೊಂದು ಕ್ರಮವನ್ನೂ ವೈಜ್ಞಾನಿಕವಾಗಿ ಪರಿಶೀಲಿಸಲಾಗುವುದು. ಭವಿಷ್ಯದ ಕಾರ್ಯಾಚರಣಾ ಸನ್ನದ್ಧತೆಗಾಗಿ ತಾತ್ಕಾಲಿಕ ಕುಮ್ಕಿ ಆನೆ ಶಿಬಿರ ಸ್ಥಾಪಿಸುವ ಕಾರ್ಯಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಹಾಸನ, ಬೇಲೂರು, ಮೂಡಿಗೆರೆ ಮತ್ತು ಚಿಕ್ಕಮಗಳೂರಿನ ಪ್ರತಿಯೊಂದು ಸಮುದಾಯಕ್ಕೂ ಸಮಾನ ರಕ್ಷಣೆ ಒದಗಿಸುವುದು ಇಲಾಖೆಯ ಆದ್ಯತೆಯಾಗಿದೆ. ಮಾನವ–ಆನೆ ಸಂಘರ್ಷದ ಸಮಸ್ಯೆಯನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವರ್ಗಾಯಿಸುವುದು ಕಾರ್ಯಾಚರಣೆಯ ಉದ್ದೇಶವಲ್ಲ. ಜಿಲ್ಲಾ ಗಡಿಗಳಿಗಿಂತ ವೈಜ್ಞಾನಿಕ ಪುರಾವೆಗಳು, ಆನೆಗಳ ವರ್ತನೆ, ಆವಾಸಸ್ಥಾನದ ಸೂಕ್ತತೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಜನರ ಸುರಕ್ಷತೆಗೆ ಪರಮೋಚ್ಚ ಆದ್ಯತೆ ನೀಡುವುದರ ಜತೆಗೆ ಆನೆಗಳ ಯೋಗಕ್ಷೇಮ ಮತ್ತು ನೈಸರ್ಗಿಕ ವನ್ಯಜೀವಿ ಕಾರಿಡಾರ್ಗಳ ಸಂರಕ್ಷಣೆಗೆ ಬದ್ಧವಾಗಿರುವುದಾಗಿ ಇಲಾಖೆ ತಿಳಿಸಿದೆ. ಐತಿಹಾಸಿಕ ಪರಿಸರ ಜ್ಞಾನ, ಆಧುನಿಕ ಮೇಲ್ವಿಚಾರಣಾ ತಂತ್ರಜ್ಞಾನ, ಸಮನ್ವಯಿತ ಆಡಳಿತ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಮಾನವ–ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಪ್ರಯತ್ನವೇ ‘ಆಪರೇಷನ್ ಗಜ’ ಎಂದು ಹೇಳಿದೆ.


Comments (0)