ಸಂಸ್ಕಾರದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರು

ದೇವರಹಿಪ್ಪರಗಿ: ಮಂದಿರದ ಶಿಲಾನ್ಯಾಸವು ಕೇವಲ ಒಂದು ಕಟ್ಟಡದ ಆರಂಭವಲ್ಲ, ಅದು ಧರ್ಮ, ಸಂಸ್ಕಾರ, ಸೇವೆ ಮತ್ತು ಸೌಹಾರ್ದದ ಹೊಸ ಯುಗಕ್ಕೆ ನಾಂದಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಕೋರವಾರದ ಶ್ರೀ ಮಹಾಂತೇಶ್ವರ ಶಿಲಾ ಮಂಟಪದ ಅಡಿಗಲ್ಲು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಲ್ಲಿನಿಂದ ಮಂದಿರ ನಿರ್ಮಿಸಿದರೆ, ಸಂಸ್ಕಾರದಿಂದ ಸುಭದ್ರ ಸಮಾಜವನ್ನು ನಿರ್ಮಿಸಲು ಸಾಧ್ಯ. ಮಂದಿರ ನಿರ್ಮಾಣದ ಜೊತೆಗೆ ಮಾನವನ ಮನಸ್ಸಿನ ನಿರ್ಮಾಣವೂ ಆಗಬೇಕಿದೆ ಎಂದು ಅವರು ಕರೆ ನೀಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಂದಿರಗಳಿಗೆ ಪವಿತ್ರ ಇತಿಹಾಸವಿದೆ. ಅವು ಕೇವಲ ಕಟ್ಟಡಗಳಲ್ಲ, ಸಂಸ್ಕಾರದ ಕೇಂದ್ರಗಳಾಗಿವೆ. ಇಂದು ಮಾಡುತ್ತಿರುವ ಶಿಲಾನ್ಯಾಸವು ಕೇವಲ ಶಿಲೆಯ ಮಂದಿರದ ಅಡಿಪಾಯವಲ್ಲ, ಬದಲಿಗೆ ಧರ್ಮನಿಷ್ಠ ಸಮಾಜ ನಿರ್ಮಾಣದ ಅಡಿಪಾಯವಾಗಿದೆ. ಪೂಜೆ, ಆಚರಣೆಗಳ ಜೊತೆಗೆ ದಯೆ, ಸೇವೆ, ಸತ್ಯ, ಪ್ರಾಮಾಣಿಕತೆ ಮತ್ತು ಪರೋಪಕಾರಗಳಿಗೆ ಆದ್ಯತೆ ದೊರೆಯಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವ ಕೇಂದ್ರಗಳು ಇವಾಗಬೇಕು. ಬಸವಲಿಂಗ ಶಿವಾಚಾರ್ಯರು ತಮ್ಮ ಮೂಲ ಮಠದ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಎಲ್ಲ ಭಕ್ತ ಸಮುದಾಯಕ್ಕೆ ಹರ್ಷ ತಂದಿದೆ ಎಂದು ಶ್ಲಾಘಿಸಿದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆ ಕೇವಲ ಆಚರಣೆಯಲ್ಲಿ ಉಳಿಯದೆ ಅದರ ಹಿಂದಿರುವ ತತ್ವ ಮತ್ತು ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅನ್ನದಾನ, ವಿದ್ಯಾದಾನ, ಆರೋಗ್ಯ ಸೇವೆ, ಪರಿಸರ ಸಂರಕ್ಷಣೆ ಮೊದಲಾದ ಸೇವಾ ಕಾರ್ಯಗಳಿಗೆ ಈ ಶಿಲಾ ಮಂಟಪ ಪ್ರೇರಣಾ ಕೇಂದ್ರವಾಗಲಿ ಎಂದು ಆಶಿಸಿದರು.

ಮಠಾಧ್ಯಕ್ಷರಾದ ಬಸವಲಿಂಗ ಶಿವಾಚಾರ್ಯರು ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಧರ್ಮ ವೀರಶೈವ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸಂಸ್ಕೃತಿ ನಮ್ಮದು. ವೈಚಾರಿಕತೆಯ ಹೆಸರಿನಲ್ಲಿ ಸಂಸ್ಕೃತಿ, ಸಭ್ಯತೆ ಮರೆಯಬಾರದು. ಮುಂದೆ ನಿಮ್ಮೆಲ್ಲರ ನೆರವು ಸಹಕಾರದಿಂದ ಮಂಟಪ ನಿರ್ಮಾಣ ಮಾಡಿ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಪಂಚಪೀಠದ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಗುವುದು ಎಂದರು.

ಸಮಾರಂಭದಲ್ಲಿ ಮಮದಾಪುರ ಮುರಘೇಂದ್ರ ಸ್ವಾಮಿಗಳು, ದೇವೂರು ಮರುಳಾರಾಧ್ಯ ಬಸವಲಿಂಗ ಶಿವಾಚಾರ್ಯರು, ಅಣಜಿ ಚನ್ನವೀರ ದೇವರು, ಕೆರೂಟಗಿ ಶಿವಬಸವಸ್ವಾಮಿಗಳು ಪಾಲ್ಗೊಂಡಿದ್ದರು. ದೇವರಹಿಪ್ಪರಗಿ, ಗಿರಿಸಾಗರ, ಆಲಮೇಲ, ಮುತ್ತಗಿ, ದೇವೂರು, ಮುಖೇಡ, ಕೆಂಭಾವಿ, ಗುಂಡಕನಾಳ, ಕೊಕಟನೂರು, ಸಿಂದಗಿ, ಯಂಕಂಚಿ, ಬಡಾಪುರ, ದೇವಣಿ ಮಠಾಧೀಶರು ಉಪಸ್ಥಿತರಿದ್ದರು. ಡಾ. ನಿಂಗನಗೌಡ ರಾಜಶೇಖರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬ.ನಾಲವಾಡಗಿ ಬಸನಗೌಡ ಎಸ್. ಪಾಟೀಲ ಮಹಾಪ್ರಸಾದ ಸೇವೆ ಸಲ್ಲಿಸಿದರು. ಯಶವಂತ ಬಡಿಗೇರ ಇವರಿಂದ ಭಕ್ತಿಗೀತೆ, ಜೇರಟಗಿ ಮಡಿವಾಳೇಶ್ವರ ಶಾಸ್ತ್ರಿಗಳಿಂದ ನಿರೂಪಣೆ ಜರುಗಿತು.

 

Related Articles

Comments (0)

Leave a Comment