ಭಕ್ತಿ ಭಂಡಾರಿ ಬಸವಣ್ಣನವರ ಬಗ್ಗೆ ಹಗುರವಾದ ಮಾತುಗಳನ್ನಾಡುವುದು ಸಲ್ಲ; ಮಹಾತ್ಮರ ಅವಹೇಳನಕ್ಕೆ ವೀರಶೈವ ಪಂಚಪೀಠಾಧೀಶ್ವರರ ಖಂಡನೆ

ಬೆಂಗಳೂರು: ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಗೆ ವಿಶೇಷ ಗೌರವ ನೀಡುವ ಭಾರತ ದೇಶದಲ್ಲಿ ಯಾವುದೇ ಸಂಪ್ರದಾಯದ ಮಹಾತ್ಮರನ್ನು ಅವಹೇಳನ ಮಾಡುವುದು ಖಂಡನೀಯ ಎಂದು ವೀರಶೈವ ಪಂಚಪೀಠದ ಜಗದ್ಗುರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಹಾಗೂ ಶ್ರೀ ಕಾಶೀ ಪೀಠದ ಜಗದ್ಗುರುಗಳು ಜಂಟಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಆಯಾ ಕಾಲಘಟ್ಟದಲ್ಲಿ ಹಲವು ಆಚಾರ್ಯರು, ಸಂತ-ಮಹಾಂತರು ಮತ್ತು ಶರಣರು ಧಾರ್ಮಿಕ ಸಂಸ್ಕೃತಿಯ ಪುನರುತ್ಥಾನಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ದಾರ್ಶನಿಕರ ವಿಚಾರಗಳಲ್ಲಿ ಅಭಿಪ್ರಾಯ ಭೇದಗಳೇನೇ ಇದ್ದರೂ, ವೈಯಕ್ತಿಕ ನಿಂದನೆ ಮತ್ತು ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದು ಜಗದ್ಗುರುಗಳು ತಿಳಿಸಿದ್ದಾರೆ.

ಇತಿಹಾಸವನ್ನು ಮೀರಿ ಬಹುಸಂಖ್ಯಾತ ಜನರು ತಮ್ಮ ತಮ್ಮ ಆರಾಧ್ಯ ವ್ಯಕ್ತಿಗಳ ಬಗ್ಗೆ ಅಪಾರ ಭಕ್ತಿ-ಭಾವವನ್ನು ಹೊಂದಿರುತ್ತಾರೆ. ಅಂತಹ ಜನರ ಭಾವನೆಗಳಿಗೆ ನೋವಾಗುವಂತಹ ಅಥವಾ ಕೆರಳಿಸುವಂತಹ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸೋಇಚ್ಛೆ ಹೇಳಿಕೆ, ಬರವಣಿಗೆ ಮತ್ತು ಟೀಕೆ-ಟಿಪ್ಪಣಿಗಳು ಹೆಚ್ಚುತ್ತಿವೆ ಎಂದು ಪೀಠಾಧೀಶ್ವರರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 12ನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣನವರ ಬಗ್ಗೆ ಹಗುರವಾದ ಹಾಗೂ ಆಕ್ಷೇಪಾರ್ಹ ಮಾತುಗಳನ್ನಾಡಿರುವ ಬಗ್ಗೆ ಮತ್ತು ಈ ಸಂಬಂಧ ಸರ್ಕಾರ ಕ್ಷಿಪ್ರ ಕ್ರಮ ಕೈಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಯಾವುದೇ ವ್ಯಕ್ತಿಗಳು ಯಾವುದೇ ಮಹಾತ್ಮರ ಕುರಿತು ಇಂತಹ ಅಸಹನೀಯ ಮಾತುಗಳನ್ನಾಡುವುದು ಅಥವಾ ಬರೆಯುವುದು ತಪ್ಪು. ಇಂತಹ ಘಟನೆಗಳು ಮುಂದೆಂದೂ ಮರುಕಳಿಸಬಾರದು ಎಂದು ವೀರಶೈವ ಪಂಚಪೀಠದ ಜಗದ್ಗುರುಗಳು ಒತ್ತಾಯಿಸಿದ್ದಾರೆ.

 

Related Articles

Comments (0)

Leave a Comment