ಚಿನ್ನದ ಖರೀದಿ ಕಡಿಮೆ ಮಾಡುವಂತೆ ಮನವಿ: ಜನರ ಸ್ಪಂದನೆಗೆ ಪ್ರಧಾನಿ ಮೋದಿ ಮೆಚ್ಚುಗೆ
- by Suddi Loka
- November 22, 2026
- 13 Views
ಲಕ್ನೋ: ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ಕಳೆದ ವರ್ಷ ತಾವು ನೀಡಿದ್ದ ಮನವಿಗೆ ಜನರು ಸ್ಪಂದಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಚಿನ್ನದ ಬೆಲೆ ಇಳಿಕೆಯಾಗಲು ಮತ್ತು ಖರೀದಿದಾರರಿಗೆ ಹಣ ಉಳಿತಾಯ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಪಶ್ಚಿಮ ಏಷ್ಯಾದ ಸಂಘರ್ಷದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಿ ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಉಂಟಾದ ಸಂದರ್ಭದಲ್ಲಿ ಚಿನ್ನದ ಖರೀದಿ ಕಡಿಮೆ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾಗಿ ತಿಳಿಸಿದರು.

ತಮ್ಮ ಮನವಿಗೆ ಜನರು ನೀಡಿದ ಸ್ಪಂದನೆಯನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಒಂದು ಹೊತ್ತಿನ ಊಟ ತ್ಯಜಿಸುವಂತೆ ನೀಡಿದ್ದ ಕರೆಗೆ ಭಾರತೀಯರು ಸ್ಪಂದಿಸಿದ ರೀತಿಗೆ ಹೋಲಿಸಿದ ಅವರು, ದೇಶದಲ್ಲಿ ಇಂದಿಗೂ ಅಂತಹ ದೇಶಭಕ್ತಿ ಮತ್ತು ಸಹಕಾರದ ಗುಣ ಜೀವಂತವಾಗಿದೆ ಎಂದರು.
ಮೇ 9ರಂದು ಪ್ರತಿ ಗ್ರಾಂಗೆ ₹15,250 ಇದ್ದ 24 ಕ್ಯಾರೆಟ್ ಚಿನ್ನದ ಬೆಲೆ, ನಿನ್ನೆ ₹12,523ಕ್ಕೆ ಇಳಿದಿದೆ. ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ಚಿನ್ನದ ಆಮದು ಸುಮಾರು ಶೇ.40ರಷ್ಟು ಕಡಿಮೆಯಾಗಿದೆ.


Comments (0)