ಲ್ಯಾಂಡ್ ಲಾರ್ಡ್ ಸಿನಿಮಾಗೆ ತೆರಿಗೆ ವಿನಾಯ್ತಿ
- by Suddi Team
- February 3, 2026
- 33 Views
ಬೆಂಗಳೂರು: 2026ರಲ್ಲಿ ಬಿಡುಗಡೆಯಾದ ಕನ್ನಡದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ಚಲನಚಿತ್ರವಾದ “ಲ್ಯಾಂಡ್ ಲಾರ್ಡ್” ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿ ನೀಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿದೆ.
ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ. ಎಸ್. ಸೂರಜ್ ಗೌಡ ಮತ್ತು ಕೆ. ವಿ. ಸತ್ಯಪ್ರಕಾಶ್ ನಿರ್ಮಾಣ,ಜಡೇಶ್ ಕೆ. ಹಂಪಿ ನಿರ್ದೇಶನದಲ್ಲಿ ಮೂಡಿಬಂದಿರುವ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು,ದುನಿಯಾ ವಿಜಯ್ (ರಾಚಯ್ಯನಾಗಿ), ರಚಿತಾ ರಾಮ್ (ನಿಂಗವ್ವನಾಗಿ), ರಾಜ್ ಬಿ. ಶೆಟ್ಟಿ (ಸಣ್ಣ ದಣಿಯಾಗಿ), ರಿತನ್ಯಾ ವಿಜಯ್ (ಭಾಗ್ಯಳಾಗಿ), ಮತ್ತು ಹಿರಿಯ ನಟಿ ಉಮಾಶ್ರೀ ನಟಿಸಿದ್ದಾರೆ.
ಈ ಚಿತ್ರವು ಸಮಾಜದಲ್ಲಿನ ಭೂಮಾಲೀಕರು ಮತ್ತು ಕೂಲಿ ಕಾರ್ಮಿಕರ ನಡುವಿನ ಸಂಘರ್ಷ ಹಾಗೂ ಸಮಾನತೆಯ ಹೋರಾಟದ ಕಥೆಯನ್ನು ಹೊಂದಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಟ ದುನಿಯಾ ವಿಜಯ್ ಮತ್ತು ಚಿತ್ರತಂಡ ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸುವಂತೆ ಆಹ್ವಾನ ನೀಡಿತ್ತು. ಆಹ್ವಾನ ಸ್ವೀಕರಿಸಿ ಸಿನಿಮಾ ವೀಕ್ಷಣೆ ಮಾಡಿದ್ದ ಸಿಎಂ, ಚಿತ್ರದ ಕಥಾಹಂದರವು ಶೋಷಿತರ ಪರವಾಗಿರುವುದು ಮತ್ತು ಜಾತಿ ಅಸಮಾನತೆಯ ವಿರುದ್ಧ ಧ್ವನಿ ಎತ್ತಿರುವುದನ್ನು ಮೆಚ್ಚಿದ್ದರು., ಇದು ಇಂದಿನ ಸಮಾಜಕ್ಕೆ ಅತ್ಯಗತ್ಯವಾದ ಸಿನಿಮಾ ಎಂದು ಶ್ಲಾಘಿಸಿದ್ದರು.
ಇಂದು ಈ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಕಾರಣದಿಂದ ತೆರಿಗೆ ವಿನಾಯ್ತಿ ನೀಡುವಂತೆ ಸಿಎಂ ಸೂಚಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ,ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಇಂತಹ ಸಾಮಾಜಿಕ ಕಳಕಳಿಯ ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಇದೀಗ ಲ್ಯಾಂಡ್ ಲಾರ್ಡ್ ಗೂ ಅದೇ ರೀತಿಯ ತೆರಿಗೆ ವಿನಾಯ್ತಿ ಸಿಕ್ಕಿದೆ.
Related Articles
Thank you for your comment. It is awaiting moderation.


Comments (0)