ಪರಮ್ ಫೌಂಡೇಶನ್’ ‘ವೇದಾಂತ ಭಾರತಿ’ ಸಂಸ್ಥೆಗಳ ನಡುವೆ ಒಡಂಬಡಿಕೆ
- by Suddi Team
- February 2, 2026
- 25 Views
ಬೆಂಗಳೂರು: ವಿಜ್ಞಾನ ಮತ್ತು ವೇದಾಂತದ ಹೆಚ್ಚಿನ ಸಂಶೋಧನೆಗಾಗಿ ಮತ್ತು ಭವಿಷ್ಯದಲ್ಲಿ ಇಂತಹ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ‘ಪರಮ್ ಫೌಂಡೇಶನ್’ ಮತ್ತು ‘ವೇದಾಂತ ಭಾರತಿ’ ಸಂಸ್ಥೆಗಳ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಭಾರತೀಯ ಸನಾತನ ಜ್ಞಾನ ಪರಂಪರೆ ಮತ್ತು ಅತ್ಯಾಧುನಿಕ ವಿಜ್ಞಾನಗಳು ಬೇರೆ ಬೇರೆಯಲ್ಲ, ಅವೆರಡೂ ಸತ್ಯಾನ್ವೇಷಣೆಯ ಎರಡು ಮುಖಗಳು ಎಂಬುದನ್ನು ಸಾಬೀತುಪಡಿಸಿದ ‘ದಕ್ಷಿಣಾಸ್ಯ ದರ್ಶಿನಿ’ ವಸ್ತು ಪ್ರದರ್ಶನವು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಪರಮ್ ಫೌಂಡೇಶನ್ ಹಾಗೂ ವೇದಾಂತ ಭಾರತಿ ಜಂಟಿಯಾಗಿ ಆಯೋಜಿಸಿದ್ದ ಈ ನಾಲ್ಕು ದಿನಗಳ ಕಾರ್ಯಕ್ರಮವು ಜ್ಞಾನಾಸಕ್ತರ ಪಾಲಿಗೆ ಹಬ್ಬವಾಗಿ ಪರಿಣಮಿಸಿತು. ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ವೇದಾಂತ ಮೇಕಥಾನ್’ (Vedanthon) ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು. ವೇದಾಂತದ ಕ್ಲಿಷ್ಟಕರವಾದ ಪರಿಕಲ್ಪನೆಗಳಾದ ಮಾಯೆ, ಪಂಚಭೂತಗಳು ಹಾಗೂ ಚೈತನ್ಯದಂತಹ ವಿಷಯಗಳನ್ನು ವಿದ್ಯಾರ್ಥಿಗಳು ರೋಬೋಟಿಕ್ಸ್, ಎಐ (AI) ಮತ್ತು ಸೆನ್ಸಾರ್‌ಗಳ ಮೂಲಕ ಸರಳವಾಗಿ ವಿವರಿಸಿದ್ದು ನೋಡುಗರ ಹುಬ್ಬೇರಿಸಿತು. ಸುಮಾರು 80ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ತಯಾರಿಸಿದ 50ಕ್ಕೂ ಅಧಿಕ ವಿಶಿಷ್ಟ ಮಾದರಿಗಳು ಜನಸಾಮಾನ್ಯರಿಗೆ ವೇದಾಂತವನ್ನು ವಿಜ್ಞಾನದ ಮೂಲಕ ಅರ್ಥಮಾಡಿಕೊಳ್ಳಲು ನೆರವಾದವು.
ರೋಮಾಂಚನಗೊಳಿಸಿದ ದ್ವಾರಕಾ:ಈ ಪ್ರದರ್ಶನದ ಹೈಲೈಟ್ ಆಗಿದ್ದು ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರದ ಮರುಸೃಷ್ಟಿ. ತ್ರೀಡಿ (3D) ತಂತ್ರಜ್ಞಾನದ ಮೂಲಕ ದ್ವಾರಕಾ ನಗರ ಮರುಜೀವ ಪಡೆದಂತೆ ವಿನ್ಯಾಸಗೊಳಿಸಲಾದ ವಿಡಿಯೋ ಪ್ರದರ್ಶನವು ಪ್ರೇಕ್ಷಕರನ್ನು ಭಾವುಕಗೊಳಿಸಿತು. ಶ್ರೀಕೃಷ್ಣನ ದ್ವಾರಕೆ ಕಣ್ಣಮುಂದೆ ಬಂದಂತೆ ಭಾಸವಾಗಿ, ಜನರಲ್ಲಿ ದೈವಿಕ ಅನುಭೂತಿಯನ್ನು ಉಂಟುಮಾಡಿತು.
ಇಸ್ರೋ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಇತಿಹಾಸ ತಜ್ಞ ವಿಕ್ರಮ್ ಸಂಪತ್ ಸೇರಿದಂತೆ ಹಲವು ಗಣ್ಯರು ಮತ್ತು ಮಠಾಧೀಶರು ಈ ಪ್ರದರ್ಶನಕ್ಕೆ ಸಾಕ್ಷಿಯಾದರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಾವಿರಾರು ಜನರು ಯಾವುದೇ ವಯಸ್ಸಿನ ಹಂಗಿಲ್ಲದೆ ವಿಜ್ಞಾನದ ಕೌತುಕಗಳನ್ನು ಕಂಡು ಬೆರಗಾದರು. ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ಸಂಸ್ಕೃತಿ ಹೇಗೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬಲ್ಲವು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಪ್ರದರ್ಶನದಲ್ಲಿ ಜನರ ಗಮನ ಸೆಳೆದ ಪ್ರಮುಖ ಅಂಶಗಳು:
• ವಿಜ್ಞಾನ ಲೋಕ: ವಿಜ್ಞಾನಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚು ಮಳಿಗೆಗಳಿದ್ದು, ಪ್ರತಿಯೊಂದು ಮಳಿಗೆಯೂ ಹೊಸ ಆವಿಷ್ಕಾರ ಮತ್ತು ಮಾಹಿತಿಯ ಕಣಜವಾಗಿತ್ತು. ಸುಮಾರು 70ಕ್ಕೂ ಹೆಚ್ಚು ಶಾಲೆಗಳ 7000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿ, ವೇದಾಂತದ ಆಳವಾದ ತತ್ವಗಳಿಗೆ ವೈಜ್ಞಾನಿಕ ರೂಪವನ್ನು ಕಂಡುಕೊಂಡರು.
• ರೋಬೋಟಿಕ್ ಕಣ್ಣು: ಮನುಷ್ಯನ ಕಣ್ಣಿನ ಸೂಕ್ಷ್ಮತೆಯನ್ನು ವಿವರಿಸುವ ಬೃಹತ್ ಗಾತ್ರದ ‘ರೋಬೋಟಿಕ್ ಕಣ್ಣು’ ಮತ್ತು ವರ್ಚುವಲ್ ರಿಯಾಲಿಟಿ (VR) ಹೆಡ್‌ಸೆಟ್‌ಗಳ ಮೂಲಕ ವೇದಾಂತವನ್ನು ಅನುಭವಕ್ಕೆ ತಂದುಕೊಟ್ಟಿದ್ದು ಮಕ್ಕಳ ಅಚ್ಚುಮೆಚ್ಚಾಗಿತ್ತು.
• ಜ್ಞಾನ ಒಪ್ಪಂದ (MoU): ವಿಜ್ಞಾನ ಮತ್ತು ವೇದಾಂತದ ಹೆಚ್ಚಿನ ಸಂಶೋಧನೆಗಾಗಿ ಮತ್ತು ಭವಿಷ್ಯದಲ್ಲಿ ಇಂತಹ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ‘ಪರಮ್ ಫೌಂಡೇಶನ್’ ಮತ್ತು ‘ವೇದಾಂತ ಭಾರತಿ’ ಸಂಸ್ಥೆಗಳ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
Related Articles
Thank you for your comment. It is awaiting moderation.


Comments (0)