ಫಿಟ್ ಇಂಡಿಯಾ’: ದೇಶಾದ್ಯಂತ 26 ಸಾವಿರ ಕಡೆ 99ನೇ ‘ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮ

ಗಾಂಧಿನಗರ: ಸಂವಿಧಾನ ದಿನಾಚರಣೆಯ ಅಂಗವಾಗಿ ದೈಹಿಕ ಕ್ಷಮತೆ, ನಾಗರಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಫಿಟ್ ಇಂಡಿಯಾದ 99ನೇ ‘ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮವನ್ನು ದೇಶಾದ್ಯಂತ 26 ಸಾವಿರ ಸ್ಥಳಗಳಲ್ಲಿ ಆಯೋಜಿಸಲಾಯಿತು.

ಗಾಂಧಿನಗರದ ದಂಡಿ ಕುಟಿರ್ ಮತ್ತು ಮಹಾತ್ಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಮತ್ತು ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಭಾಗವಹಿಸಿದ್ದರು. ನಾಗರಿಕರು, ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಉತ್ಸಾಹಿಗಳು ಕೂಡ ಸೈಕ್ಲಿಂಗ್‌ನಲ್ಲಿ ಪಾಲ್ಗೊಂಡರು.

‘ವಿಕಸಿತ ಭಾರತ 2047’ ಗುರಿ ಸಾಧಿಸಲು ಸದೃಢ, ಆರೋಗ್ಯವಂತ ಮತ್ತು ಮಾದಕವಸ್ತು ಮುಕ್ತ ಯುವಜನತೆ ಅಗತ್ಯ ಎಂದು ಮಾಂಡವೀಯ ಹೇಳಿದರು. ಸೈಕ್ಲಿಂಗ್‌ ಸೇರಿದಂತೆ ದೈಹಿಕ ಚಟುವಟಿಕೆಗಳನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳುವಂತೆ ಯುವಜನರಿಗೆ ಕರೆ ನೀಡಿದರು. ಆರೋಗ್ಯಕರ ಜೀವನಶೈಲಿ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಸೈಕ್ಲಿಂಗ್ ನೆರವಾಗಲಿದೆ ಎಂದರು.

ನವೆಂಬರ್ 29ರಂದು ನಡೆಯಲಿರುವ 100ನೇ ಆವೃತ್ತಿಯನ್ನು ಭಾರತದಲ್ಲಿ ಒಲಿಂಪಿಕ್ ಚಳವಳಿಯ ಆಚರಣೆಗೆ ಸಮರ್ಪಿಸಲಾಗುವುದು ಎಂದು ಅವರು ಘೋಷಿಸಿದರು. ಈ ಕಾರ್ಯಕ್ರಮವು ಒಲಿಂಪಿಕ್ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲಿದೆ.

ದೇಶಾದ್ಯಂತ ಹೆಚ್ಚುತ್ತಿರುವ ಜನರ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದ ಹರ್ಷ ಸಂಘವಿ, ಈ ಅಭಿಯಾನವು ಆರೋಗ್ಯಕರ ಜೀವನಶೈಲಿ ಮತ್ತು ನಿತ್ಯದ ಫಿಟ್‌ನೆಸ್ ಅಭ್ಯಾಸಕ್ಕೆ ಪ್ರೇರಣೆ ನೀಡುತ್ತಿದೆ ಎಂದರು.

ನವೆಂಬರ್ 26ರಂದು ಆಚರಿಸಲಾಗುವ ಸಂವಿಧಾನ ದಿನದ ಮುನ್ನಾದಿನದಂದು 99ನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು.

Related Articles

Comments (0)