ಕೈಗಾರಿಕಾ ಪ್ರಗತಿ ಹಾಗೂ ಪರಿಸರ ಸಂರಕ್ಷಣೆ ಜೊತೆಯಾಗಿ ಸಾಗಲು ಬಿಡದಿ ಟೊಯೋಟಾ ಇಕೋಝೋನ್ ಮಾದರಿ: ಸಚಿವ ರಾಮಲಿಂಗಾರೆಡ್ಡಿ ಶ್ಲಾಘನೆ
- by Suddi Team
- September 29, 2026
- 59 Views
ಬಿಡದಿ: “ಕೈಗಾರಿಕಾ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎಂಬುದು ಪರಸ್ಪರ ವಿರುದ್ಧವಾದ ಸಂಗತಿಗಳಲ್ಲ. ಅವೆರಡೂ ಒಟ್ಟಿಗೆ ಸಾಗಿ ಪ್ರಕೃತಿಯನ್ನು ಬಲಪಡಿಸಬಹುದು ಎಂಬುದಕ್ಕೆ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಇಕೋಝೋನ್ ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಇಕೋಝೋನ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯ ‘ಸುಸ್ಥಿರತಾ ವರದಿ’ಯನ್ನು (Sustainability Report) ಬಿಡುಗಡೆ ಮಾಡಿ ಅವರು ಮಾತನಾಡಿದರು.
100 ಎಕರೆಗೂ ವಿಸ್ತರಿಸಿದ ಹಸಿರು ಅರಣ್ಯ: ಕೈಗಾರಿಕಾ ಚಟುವಟಿಕೆಗಳ ಮಧ್ಯೆಯೂ ಸಂಸ್ಥೆಯು ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಸಿರು ವಲಯವನ್ನು ಸೃಷ್ಟಿಸಿದೆ. ಇಲ್ಲಿ 790ಕ್ಕೂ ಅಧಿಕ ಸ್ಥಳೀಯ ಸಸ್ಯ ಪ್ರಭೇದಗಳು ಹಾಗೂ 400ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ ಸಂಕುಲಗಳಿಗೆ ಆಸರೆಯಾಗಿರುವ ನಿತ್ಯಹರಿದ್ವರ್ಣ ಮತ್ತು ಪರ್ಣಪಾತಿ ಕಾಡುಗಳನ್ನು ಒಳಗೊಂಡ ಕರ್ನಾಟಕದ ವಿವಿಧ ಮಾದರಿಯ ಅರಣ್ಯ ಪರಿಸರ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಪರಿಸರ ಸ್ನೇಹಿ ತಂತ್ರಜ್ಞಾನಕ್ಕೆ ಒತ್ತು: ಕೈಗಾರಿಕಾ ಕಾರ್ಯಾಚರಣೆಯ ಜೊತೆಗೆ ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ, ತ್ಯಾಜ್ಯನೀರಿನ ವೈಜ್ಞಾನಿಕ ಸಂಸ್ಕರಣೆ ಮತ್ತು ಅದರ ಮರುಬಳಕೆಯಂತಹ ಹತ್ತಾರು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಸರ್ಕಾರದಿಂದ ಭೂಮಿ ಹಾಗೂ ಅಗತ್ಯ ಸಹಕಾರದ ಭರವಸೆ: ಮುಂದಿನ ಪೀಳಿಗೆಗೆ ಹಸಿರು ಮತ್ತು ಸುಸ್ಥಿರ ಕರ್ನಾಟಕವನ್ನು ನಿರ್ಮಿಸಲು ಸರ್ಕಾರ, ಕೈಗಾರಿಕೆ ಹಾಗೂ ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕಿದೆ. ಪರಿಸರ ಸಂರಕ್ಷಣೆಯ ಇಂತಹ ಮಾದರಿ ಆಂದೋಲನಗಳಿಗೆ ಕೈಜೋಡಿಸುವ ಕೈಗಾರಿಕಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಭೂಮಿ ಸೇರಿದಂತೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಟೊಯೋಟಾ ಸಂಸ್ಥೆಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಜಿ. ಶಂಕರ, ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ವಿಕ್ರಮ್ ಗುಲಾಟಿ, ಬಿ. ಪದ್ಮನಾಭ ಸೇರಿದಂತೆ ಸಂಸ್ಥೆಯ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)