ಸಾಮಾಜಿಕ ಬದುಕಿಗೆ ವೀರಶೈವ ಪಂಚ ಪೀಠಗಳ ಕೊಡುಗೆ ಅಪಾರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಂಸೆ

ಬೆಂಗಳೂರು: “ಸಕಲ ಜೀವರಾಶಿಗಳ ಹಿತವನ್ನು ಬಯಸುವ ಮತ್ತು ಮಾನವ ಧರ್ಮದ ಅತ್ಯುನ್ನತ ವಿಚಾರಧಾರೆಗಳನ್ನು ಜಗತ್ತಿಗೆ ನೀಡಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ. ನಮ್ಮ ಸಾಮಾಜಿಕ ಬದುಕಿಗೆ ವೀರಶೈವ ಧರ್ಮದ ಪಂಚ ಪೀಠಗಳು ನೀಡಿರುವ ಸಂಸ್ಕಾರ ಮತ್ತು ಸಂಸ್ಕೃತಿಯ ಕೊಡುಗೆ ಅತ್ಯಂತ ಅಪಾರವಾದುದಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಅವರು ಭಾನುವಾರ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಸಂಯೋಜಿಸಿದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಎಲ್ಲ ಧರ್ಮಗಳಲ್ಲಿ ಅಡಗಿರುವ ಪರಮ ಸತ್ಯ ಒಂದೇಯಾಗಿದ್ದು ಪ್ರತಿಯೊಬ್ಬರೂ ಅರಿಯುವ ಅವಶ್ಯಕತೆಯಿದೆ. ಸ್ವಧರ್ಮ ಪರಿಪಾಲನೆ ಮತ್ತು ಪರಧರ್ಮ ಸಹಿಷ್ಣುತೆ ಭಾರತೀಯರ ಆದರ್ಶ ವಿಶಾಲ ಗುಣ. ವಿವಿಧ ಧರ್ಮಗಳು ಮತ್ತು ಅವುಗಳ ವಿಚಾರಗಳು ಮಾನವ ಜೀವನದ ವಿಕಾಸಕ್ಕೆ ಪೂರಕವಾಗಿವೆ. ಧರ್ಮದ ಆದರ್ಶಗಳನ್ನು ಪರಿಪಾಲಿಸುವುದು ನಿಜವಾದ ಧರ್ಮ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸರ್ವ ಧರ್ಮಗಳ ಸಾರವನ್ನು ಒಳಗೊಂಡ ಮಾನವ ಧರ್ಮಕ್ಕೆ ಜಯವಾಗಲೆಂಬ ಸದಾಶಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಶಿವನ ಆಶೀರ್ವಾದದಿಂದ ಜನಿಸಿದ ನನಗೆ ಶಿವಕುಮಾರ ಎಂಬ ನಾಮಕರಣ ಆಯಿತು. ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಓದುವ ಸೌಭಾಗ್ಯ ನನಗೆ ದೊರಕಿತು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ನಾನು ಸಂಚರಿಸಿ ಅನೇಕ ಪೂಜ್ಯರ ಆಶೀರ್ವಾದ ಪಡೆದಿದ್ದೇನೆ. ಆದರೆ ಒಂದು ದಿನ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪಾದ ಸ್ಪರ್ಶ ಮಾಡಿದಾಗ ನನಗೆ ಆದ ಅನುಭವ ಅವರ್ಣನೀಯ. ಅಂದಿನಿಂದ ನಾನು ಅವರ ಆರಾಧಕನಾಗಿ ಬೆಳೆದಿದ್ದೇನೆ. ಮನುಷ್ಯ ವಿವಿಧ ಹಂತಗಳಲ್ಲಿ ಬೆಳೆಯುತ್ತಾನೆ. ಧರ್ಮ ಬೇಕು ಎನ್ನುವವರು ಬೇಡ ಎನ್ನುವವರು ಇದ್ದಾರೆ. ಆದರೆ ವ್ಯಕ್ತಿ ನಿಧನ ಹೊಂದಿದಾಗ ಆತನನ್ನು ಸುಡಬೇಕೋ ಹೂಳಬೇಕೋ ಎಂದು ನಿರ್ಧರಿಸುವುದು ಆತನ ಧರ್ಮ ಎಂಬುದನ್ನು ಮರೆಯಬಾರದು. ವೀರಶೈವ ಲಿಂಗಾಯತ ಮಠಗಳು ಅವು ಸಣ್ಣದಿರಬಹುದು ದೊಡ್ಡದಿರಬಹುದು ಅವೆಲ್ಲವುಗಳು ಜನತೆಗೆ ಅನ್ನ ಅಕ್ಷರ ದಾಸೋಹ ನೀಡುತ್ತಿರುವುದನ್ನು ಯಾರೂ ಮರೆಯಬಾರದು. ವೀರಶೈವ ಧರ್ಮ ಪ್ರಜಾಪ್ರಭುತ್ವದ ಪರಿಕಲ್ಪನೆ ಮೂಡಿಸಿದೆ. ಸರ್ವರಿಗೂ ಸಮಬಾಳು ಸಮಪಾಲು ಎಂದು ಹೇಳಿದ ಧರ್ಮ ಇದಾಗಿದೆ. ಒಗ್ಗಟ್ಟಿನಲ್ಲಿ ಶಕ್ತಿ ಇದೆ. ವೀರಶೈವ ಮಠಾಧೀಶರಿಂದ ಉತ್ತಮ ಕೆಲಸ ನಡೆದಿದೆ. ಮರಕ್ಕೆ ಬೇರು ಮನಸ್ಸಿಗೆ ನಂಬಿಕೆ ಇದ್ದಾಗ ಎಲ್ಲವೂ ಸಮರ್ಪಕವಾಗಿ ನಡೆಯುತ್ತದೆ. ಧರ್ಮ ಹಲವಾದರೂ ತತ್ವ ಒಂದೇ. ನಾಮ ಹಲವಾದರೂ ದೇವನು ಒಬ್ಬನೇ. ಧರ್ಮದ ತತ್ವ ತಿಳಿದು ಬದುಕಬೇಕು. ಸಮಾಜ ಸೇವೆ ಮಾಡಿದವರನ್ನು ಸಮಾಜ ಗುರುತಿಸುತ್ತದೆ. ಸ್ವಾಮೀಜಿಗಳು ಬೆಂಗಳೂರಿಗೆ ಬಂದಾಗ ಉಳಿಯಲು ಒಂದು ವ್ಯವಸ್ಥೆ ಕೇಳಿದ್ದೀರಿ. ಜಾಗೆ ಕೊಡುತ್ತೇನೆ. ಆದರೆ ಜಾಗ ನಮ್ಮದು ಕಟ್ಟಡ ನಿಮ್ಮದು. ಎಲ್ಲರ ಸಹಕಾರದಿಂದ ಕಟ್ಟಡ ನಿರ್ಮಾಣವಾಗಲಿ ಎಂದರು. ಪಂಚ ಪೀಠಗಳು ರಾಷ್ಟ್ರೀಯ ಗುರು ಪೀಠಗಳಾಗಿವೆ. ಸಮಾಜದಲ್ಲಿ ಶಾಂತಿ ಸಾಮರಸ್ಯ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಸದಾ ಶ್ರಮಿಸುತ್ತಿರುವುದನ್ನು ಮರೆಯಲಾಗದೆಂದ ಅವರು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪಂಚ ಪೀಠಗಳ ಮಾರ್ಗದರ್ಶನ ಆಶೀರ್ವಾದ ಸದಾ ಇರಲೆಂದು ಬಯಸಿದರು.

ಸಾನ್ನಿಧ್ಯ ವಹಿಸಿದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ವೀರಶೈವ ಧರ್ಮವು ಶಿವಾದ್ವೈತ ಸಿದ್ದಾಂತದ ತಳಹದಿಯ ಮೇಲೆ ನೆಲೆಗೊಂಡಿರುವ ಧರ್ಮವಾಗಿದೆ.ಭಕ್ತಿ ಜ್ಞಾನ ಆಚಾರ ವಿಚಾರ ಮತ್ತು ದಾಸೋಹಗಳನ್ನು ಜೀವನ ಮಾರ್ಗವಾಗಿ ಪ್ರತಿಪಾದಿಸಿದೆ. ಇಂದಿನ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಬೋಧಿಸಿದ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪವಿತ್ರ ಸಂಕಲ್ಪವಾಗಿದೆ. ಆಚಾರ್ಯರು ಮತ್ತು ಶರಣರು ಕೊಟ್ಟ ಆದರ್ಶ ಆಧ್ಯಾತ್ಮಿಕ ಚಿಂತನೆಗಳನ್ನು ಮರೆಯಬಾರದೆಂದರು.

ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ವೀರಶೈವ ಲಿಂಗಾಯತ ಇವೆರಡೂ ಒಂದೇ. ಒಂದು ಸೈದ್ದಾಂತಿಕ ಪದವಾದರೆ ಇನ್ನೊಂದು ಸಾಮಾಜಿಕವಾಗಿ ರೂಢಿಯಲ್ಲಿ ಬಂದಿರುವುದಾಗಿದೆ. ಇವೆರಡರಲ್ಲಿ ದ್ವಂದ್ವ ಹುಟ್ಟು ಹಾಕದೇ ಸದ್ಭಾವನೆಯಿಂದ ಬದುಕಿ ಬಾಳಿ ಶ್ರೇಯಸ್ಸನ್ನು ಕಾಣಬೇಕೆಂದರು.

ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ವೀರಶೈವ ಧರ್ಮದ ಮೂಲ ಬೇರುಗಳನ್ನು ಶಿವಾಗಮಗಳಲ್ಲಿ ಕಾಣಬಹುದು. ಇವುಗಳ ಇತಿಹಾಸ ಪರಂಪರೆ ಅತ್ಯಂತ ಪ್ರಾಚೀನವಾದುದು. ನಮ್ಮ ಧರ್ಮ ಸಂಸ್ಕೃತಿ ಆದರ್ಶಗಳನ್ನು ಬೆಳೆಸುವ ಮಹತ್ಕಾರ್ಯವನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಮಾಡುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀ ಕಾಶಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಲ್ಪಟ್ಟ ಸಿದ್ಧಾಂತ ಶಿಖಾಮಣಿಯಲ್ಲಿ ಜೀವ ಶಿವನಾಗುವ ನರ ಹರನಾಗುವ ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಬೋಧಿಸಿದ್ದಾರೆ. ಎಲ್ಲ ಶಿವಾಗಮಗಳ ಸಾರವನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಕಾಣಬಹುದು. ಇದೇ ದಾರಿಯಲ್ಲಿ 12ನೇ ಶತಮಾನದ ಶರಣರು ನಡೆದು ಉನ್ನತಿಯನ್ನು ಕಂಡರೆಂದರು.

ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ಖಾತೆ ಸಚಿವರೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಮಾತನಾಡಿ ಜಾತಿ ಮತ ಪಂಥ ಗಡಿಗಳನ್ನು ಮೀರಿ ಎಲ್ಲಾ ಸಮುದಾಯಗಳ ಅಭ್ಯುದಯಕ್ಕೆ ಶ್ರಮಿಸಿದ ಧರ್ಮ ವೀರಶೈವ ಲಿಂಗಾಯತ ಧರ್ಮ, ಆಚಾರ್ಯರ ಮತ್ತು ಶರಣರ ವಿಚಾರಗಳನ್ನು ಸಮೀಕರಿಸಿ ಉತ್ತಮ ಸಮಾಜ ಕಟ್ಟಬೇಕೆಂಬ ಸಂಕಲ್ಪ ನಮ್ಮದು. ಆಚಾರ್ಯರು-ಶರಣರು ವೀರಶೈವ ಲಿಂಗಾಯತ ಧರ್ಮದ ಎರಡು ಕಣ್ಣು ಎಂದರು.

ಸಣ್ಣ ಕೈಗಾರಿಕಾ ಸಚಿವ ವಿಜಯಾನಂದ ಕಾಶಪ್ಪನವರು ವೀರಶೈವ ಲಿಂಗಾಯತ ಧರ್ಮದ ವಿಶಾಲ ಮನೋಭಾವನೆಗಳನ್ನು ಪ್ರತಿಪಾದಿಸಿದರು. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು. ಸಮ್ಮೇಳನದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಸುಮಾರು 500 ಜನ ಮಠಾಧೀಶರು ಪಾಲ್ಗೊಂಡಿದ್ದರು.

 

 

 

Related Articles

Comments (0)

Leave a Comment