ಗಾಂಧಿ ಜಯಂತಿ, ವಾರಾಂತ್ಯದ ಸರಣಿ ರಜೆ: ಕೆಎಸ್‌ಆರ್‌ಟಿಸಿಯಿಂದ 850 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ

ಬೆಂಗಳೂರು: ಅಕ್ಟೋಬರ್ 2ರ ಗಾಂಧಿ ಜಯಂತಿ ಹಾಗೂ ಸರಣಿ ವಾರಾಂತ್ಯದ ರಜೆಗಳ (ಲಾಂಗ್ ವೀಕೆಂಡ್) ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಅಕ್ಟೋಬರ್ 1 ಮತ್ತು 2 ರಂದು ಬೆಂಗಳೂರಿನಿಂದ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳ ಪ್ರಮುಖ ನಗರಗಳಿಗೆ 850 ಹೆಚ್ಚುವರಿ ವಿಶೇಷ ಬಸ್‌ಗಳ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.

ರಜೆ ಮುಗಿಸಿ ಮರಳುವ ಪ್ರಯಾಣಿಕರಿಗಾಗಿ ಅಕ್ಟೋಬರ್ 4 ರಂದು ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ವಾಹನಗಳನ್ನು ನಿಯೋಜಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ ನಿಲ್ದಾಣದಿಂದ ಎಲ್ಲೆಲ್ಲಿಗೆ ವಿಶೇಷ ಬಸ್?:

ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಇಲ್ಲಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್ ಹಾಗೂ ಹೊರರಾಜ್ಯಗಳಾದ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್‌ಗಳು ಹೊರಡಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗಗಳ ಸಾರಿಗೆ ವ್ಯವಸ್ಥೆ ಇರಲಿದೆ.

ಶಾಂತಿನಗರ ನಿಲ್ದಾಣ: ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರಮುಖ ನಗರಗಳಾದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಸೂರ್, ಎರ್ನಾಕುಲಂ, ಕೋಳಿಕೋಡ್ ಸೇರಿದಂತೆ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಪ್ರತಿಷ್ಠಿತ ಸಾರಿಗೆಗಳ ಬಸ್‌ಗಳು ಇಲ್ಲಿಂದ ಹೊರಡಲಿವೆ.

ಟಿಕೆಟ್ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ಸೌಲಭ್ಯ:

ಮುಂಗಡ ಆಸನ ಕಾಯ್ದಿರಿಸುವ ಪ್ರಯಾಣಿಕರಿಗೆ ನಿಗಮವು ವಿಶೇಷ ಸೌಲಭ್ಯ ಪ್ರಕಟಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5 ರಷ್ಟು ರಿಯಾಯಿತಿ ಸಿಗಲಿದೆ. ಅದೇ ರೀತಿ, ಹೋಗುವ ಮತ್ತು ಬರುವ (ರೌಂಡ್ ಟ್ರಿಪ್) ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಬರುವ ಪ್ರಯಾಣದ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಿಗಮ ತಿಳಿಸಿದೆ.

ಆನ್‌ಲೈನ್ ಬುಕಿಂಗ್‌ಗೆ ಮುಕ್ತ ಅವಕಾಶ:

ಸಾರ್ವಜನಿಕರು ನಿಗಮದ ಅಧಿಕೃತ ಇ-ಟಿಕೆಟ್ ಬುಕಿಂಗ್ ಜಾಲತಾಣವಾದ www.ksrtc.karnataka.gov.in ಮುಖಾಂತರ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಕರ್ನಾಟಕ ಹಾಗೂ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೇರಿಗಳಲ್ಲಿರುವ ಪ್ರಮುಖ ಕೌಂಟರ್‌ಗಳ ಮೂಲಕವೂ ಮುಂಗಡ ಬುಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ತಮ್ಮ ಟಿಕೆಟ್‌ಗಳ ಮೇಲೆ ನಮೂದಿಸಲಾಗಿರುವ ನಿಲ್ದಾಣ ಹಾಗೂ ಪಿಕ್‌ಅಪ್ ಪಾಯಿಂಟ್‌ಗಳ ಹೆಸರನ್ನು ಗಮನಿಸುವಂತೆ ಸಾರಿಗೆ ನಿಗಮ ಮನವಿ ಮಾಡಿದೆ.

 

 

Related Articles

Comments (0)

Leave a Comment