ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಕಸ್ತೂರಿ ರಂಗನ್ ವರದಿಯ 7ನೇ ಕರಡು ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪದಿರಲು ಕರ್ನಾಟಕ ವಿಧಾನ ಪರಿಷತ್ತು ಸರ್ವಾನುಮತದ ಮಹತ್ವದ ನಿರ್ಣಯವನ್ನು ಅಂಗೀಕರಿಸಿದೆ.  ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರು ಮಂಡಿಸಿದ ಈ ಅಧಿಕೃತ ನಿರ್ಣಯಕ್ಕೆ ಉಭಯ ಸದನಗಳಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಒಮ್ಮತದ ಬೆಂಬಲ ಸೂಚಿಸಿದರು.

ಕೇಂದ್ರ ಸರ್ಕಾರವು ಜುಲೈ 27, 2026 ರಂದು ಹೊರಡಿಸಿರುವ ಈ ಕರಡು ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಗಳ, 1449 ಗ್ರಾಮಗಳನ್ನೊಳಗೊಂಡ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ESA ಅಡಿಯಲ್ಲಿ ಗುರುತಿಸಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ನಂತರ ಈ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು.

ಕರಡು ಅಧಿಸೂಚನೆಯಲ್ಲಿರುವ ಪ್ರಮುಖ ನ್ಯೂನತೆಗಳು:

ಅವೈಜ್ಞಾನಿಕ ಉಪಗ್ರಹ ದತ್ತಾಂಶ: ಪ್ರಸ್ತುತ ವರದಿಯು ಕೇವಲ ಉಪಗ್ರಹ ದತ್ತಾಂಶದ (Satellite Data) ಆಧಾರದ ಮೇಲೆ ಸಿದ್ಧವಾಗಿದ್ದು, ಯಾವುದೇ ನಿಖರ ಭೌತಿಕ ಗಡಿ ಅಥವಾ ಸರ್ವೆ ನಂಬರ್ ಆಧಾರಿತವಾಗಿಲ್ಲ.

ಇಡೀ ಗ್ರಾಮ ಸೇರ್ಪಡೆ: ಒಂದು ಗ್ರಾಮದ ಐದನೇ ಒಂದು ಭಾಗ (1/5) ಅರಣ್ಯ ವ್ಯಾಪ್ತಿಯಲ್ಲಿದೆ ಎಂಬ ಒಂದೇ ಕಾರಣಕ್ಕೆ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ.

ರೈತರ ಸಮಸ್ಯೆಗಳು: ಕೃಷಿ ಜಮೀನು, ತೋಟಗಳು ಮತ್ತು ಮನೆಗಳು ESA ವ್ಯಾಪ್ತಿಗೆ ಬರುವುದರಿಂದ ಆಸ್ತಿ ವಿಭಜನೆ, ವಾರಸುದಾರಿಕೆ ಹಾಗೂ ಮನೆ ನಿರ್ಮಾಣಕ್ಕೆ ತೀವ್ರ ತೊಂದರೆಯಾಗಲಿದೆ. ಜೊತೆಗೆ ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್ ಹಾಗೂ ನ್ಯಾಯಾಂಗ ಪ್ರಕರಣಗಳಿರುವ ಭೂಮಿಯನ್ನು ಪರಿಗಣಿಸಿಲ್ಲ.

ಆರ್ಥಿಕ ನೆರವಿನ ಕೊರತೆ: ಬಾಧಿತರಾಗುವ ಜನರಿಗೆ ಪರ್ಯಾಯ ಜೀವನೋಪಾಯಕ್ಕೆ ಯಾವುದೇ ವಿಶೇಷ ಆರ್ಥಿಕ ನೆರವಿನ ಪ್ರಸ್ತಾಪ ಇದರಲ್ಲಿಲ್ಲ.

ಕೇಂದ್ರ ಸರ್ಕಾರಕ್ಕೆ ರಾಜ್ಯದ ಪ್ರಮುಖ ಒತ್ತಾಯಗಳು:

ಅರಣ್ಯಕ್ಕೆ ಮಾತ್ರ ಸೀಮಿತಗೊಳಿಸಿ: ESA ವ್ಯಾಪ್ತಿಗೆ ಕೇವಲ ಈಗಾಗಲೇ ಮಂಜೂರಾದ ಪ್ರದೇಶಗಳನ್ನು ಹೊರತುಪಡಿಸಿ, ಕೇವಲ ಅಧಿಸೂಚಿತ ಅರಣ್ಯ ಪ್ರದೇಶಗಳನ್ನು ಮಾತ್ರ ಸೇರಿಸಬೇಕು.

ಕೃಷಿ ಭೂಮಿಗೆ ವಿನಾಯಿತಿ: ಕೃಷಿ ಭೂಮಿ, ತೋಟಗಾರಿಕೆ/ಪ್ಲಾಂಟೇಶನ್, ಜನವಸತಿ ಮತ್ತು ಸಾರ್ವಜನಿಕ ಚಟುವಟಿಕೆ ನಡೆಯುವ ಪ್ರದೇಶಗಳನ್ನು ಇದರಿಂದ ಸಂಪೂರ್ಣವಾಗಿ ಹೊರಗಿಡಬೇಕು.

ಒಂದು ವರ್ಷದ ಕಾಲಾವಕಾಶ: ರಾಜ್ಯ ಸರ್ಕಾರವೇ ಸ್ವತಃ ತಜ್ಞರ ಸಮಿತಿಯ ಮೂಲಕ ಭೌತಿಕವಾಗಿ ಸರ್ವೆ ನಂಬರ್‌ವಾರು ಅಳತೆ ಮಾಡಲು ನಿರ್ಧರಿಸಿದ್ದು, ಈ ಪ್ರಕ್ರಿಯೆ ಮುಗಿಯುವವರೆಗೆ ಅಂದರೆ ಒಂದು ವರ್ಷದ ಅವಧಿಗೆ ಕೇಂದ್ರ ಸರ್ಕಾರವು ಅಂತಿಮ ಅಧಿಸೂಚನೆಯನ್ನು ಹೊರಡಿಸಬಾರದು.

ರಾಜ್ಯ ಸರ್ಕಾರದ ಮುಂದಿನ ಕ್ರಮಗಳು:

ವರದಿಯ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಿದೆ. ಈ ಸಮಿತಿಯಲ್ಲಿ ಕಂದಾಯ ಮತ್ತು ಅರಣ್ಯ ಅಧಿಕಾರಿಗಳು, ರೈತರು ಹಾಗೂ ಕೈಗಾರಿಕಾ ಉದ್ಯಮಗಳ ಪ್ರತಿನಿಧಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ತಜ್ಞ ವಿಜ್ಞಾನಿಗಳು ಇರಲಿದ್ದಾರೆ. ಈ ಸಮಿತಿಗೆ ಸಹಾಯ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ.

ರಾಜ್ಯ ಸರ್ಕಾರವು ಭೌತಿಕ ಸರ್ವೆ ನಡೆಸಿ ತನ್ನ ವರದಿಯನ್ನು ಸಲ್ಲಿಸಿದ ನಂತರವೇ, ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ವಿವರವಾದ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ವಾನುಮತದ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

 

 

Related Articles

Comments (0)

Leave a Comment