ಮೆಡಿಕವರ್ ಆಸ್ಪತ್ರೆ ಹಾಗೂ ಕನ್ನಮಂಗಲ ಅಪಾರ್ಟ್ಮೆಂಟ್ಗಳ ನಡುವೆ ಆರೋಗ್ಯ ಒಪ್ಪಂದ; ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ
- by Suddi Team
- June 21, 2026
- 10 Views
ಬೆಂಗಳೂರು: ಜನಸಾಮಾನ್ಯರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವ ಸಲುವಾಗಿ ಮೆಡಿಕವರ್ ಆಸ್ಪತ್ರೆ ವೈಟ್ಫೀಲ್ಡ್ ಹಾಗೂ ಮಹದೇವಪುರ ಕ್ಷೇತ್ರದ ಕನ್ನಮಂಗಲ ಮತ್ತು ಸೀಗೆಹಳ್ಳಿ ವಾರ್ಡ್ನ ವಿವಿಧ ಅಪಾರ್ಟ್ಮೆಂಟ್ ನಿವಾಸಿಗಳ ಸಂಘಗಳ (RWA) ನಡುವೆ ಮಹತ್ವದ ಒಪ್ಪಂದ ಪತ್ರಕ್ಕೆ (MoU) ಸಹಿ ಹಾಕಲಾಗಿದೆ.
ಮೆಡಿಕವರ್ ಆಸ್ಪತ್ರೆ ವೈಟ್ಫೀಲ್ಡ್ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಕನ್ನಮಂಗಲ, ಸೀಗೆಹಳ್ಳಿ ವಾರ್ಡ್ನ ವಿವಿಧ ಅಪಾರ್ಟ್ಮೆಂಟ್ ಸಂಘಗಳ (RWA) ನಡುವೆ ಆರೋಗ್ಯ ಸೇವೆಗಳನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರಕ್ಕೆ ತಲುಪಿಸುವ ಉದ್ದೇಶದಿಂದ ಒಪ್ಪಂದ ಪತ್ರ (MoU) ಸಹಿ ಸಮಾರಂಭವು ಕನ್ನಮಂಗಲ ವಾರ್ಡ್ನ ಸುಮಧುರ ಈಡನ್ ಗಾರ್ಡನ್ಸ್ ಅಪಾರ್ಟ್ಮೆಂಟ್ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಹಾಗೂ ಮೆಡಿಕವರ್ ಆಸ್ಪತ್ರೆಯ ಸೆಂಟರ್ ಹೆಡ್ ಕೃಷ್ಣಮೂರ್ತಿ ಅವರು ಭಾಗವಹಿಸಿ ರಿಬ್ಬನ್ ಕತ್ತರಿಸುವ ಮೂಲಕ ಮೆಡಿಕವರ್ ಆಸ್ಪತ್ರೆಯ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು.
ಈ ಒಪ್ಪಂದದ ಮೂಲಕ ಕನ್ನಮಂಗಲ ವಾರ್ಡ್ ವ್ಯಾಪ್ತಿಯ ಸುಮಾರು 70ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳ ಸಾವಿರಾರು ನಿವಾಸಿಗಳಿಗೆ ಆರೋಗ್ಯ ಸೇವೆಗಳು ಲಭ್ಯವಾಗಲಿದ್ದು, ಪ್ರತಿಯೊಬ್ಬ ಕುಟುಂಬಕ್ಕೂ ಉಚಿತ ಫ್ಯಾಮಿಲಿ ಹೆಲ್ತ್ ಕಾರ್ಡ್, 24×7 ಉಚಿತ ಆಂಬ್ಯುಲೆನ್ಸ್ ಸೇವೆ, ನಿಯಮಿತ ಆರೋಗ್ಯ ತಪಾಸಣಾ ಶಿಬಿರಗಳು, ಆಸ್ಪತ್ರೆಯಲ್ಲಿ ಆದ್ಯತಾ ಚಿಕಿತ್ಸಾ ಸೌಲಭ್ಯ ಹಾಗೂ ವೈದ್ಯಕೀಯ ಸೇವೆಗಳಲ್ಲಿ ವಿಶೇಷ ರಿಯಾಯಿತಿಗಳನ್ನು ಒದಗಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮೆಡಿಕವರ್ ಆಸ್ಪತ್ರೆಯ ಸೆಂಟರ್ ಹೆಡ್ ಶ್ರೀ ಕೃಷ್ಣಮೂರ್ತಿ ಅವರು, “ಈ ಒಪ್ಪಂದದ ಮೂಲಕ ಸುಮಾರು 70 ಅಪಾರ್ಟ್ಮೆಂಟ್ಗಳ ನಿವಾಸಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಮಹತ್ವದ ಪ್ರಯತ್ನ ಮಾಡಲಾಗಿದೆ. ಮೆಡಿಕವರ್ ಆಸ್ಪತ್ರೆಯ ಆಂಬ್ಯುಲೆನ್ಸ್ಗಳು ದಿನದ 24 ಗಂಟೆಯೂ ನಿವಾಸಿಗಳ ಸೇವೆಗೆ ಸಿದ್ಧವಾಗಿರಲಿವೆ. ನಿವಾಸಿಗಳು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.
ನಂತರ ಮಾತನಾಡಿದ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಅವರು, “ಮೆಡಿಕವರ್ ಆಸ್ಪತ್ರೆಯ ಈ ಸಾಮಾಜಿಕ ಕಳಕಳಿ ಮತ್ತು ಜನಪರ ಆರೋಗ್ಯ ಸೇವಾ ಉಪಕ್ರಮ ಶ್ಲಾಘನೀಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳ ಮೂಲಕ ಮಹದೇವಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಎಲ್ಲರ ಸಹಕಾರ ಅಗತ್ಯ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪಾರ್ಟ್ಮೆಂಟ್ ಸಂಘಗಳ ಪದಾಧಿಕಾರಿಗಳು, ಮೆಡಿಕವರ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೂರಾರು ನಿವಾಸಿಗಳು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)