ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ ಪಿಎಂ ಮೋದಿ

ಬೆಂಗಳೂರು: ವಂದೇ ಭಾರತ್ ರೈಲುಗಳು ದೇಶದ ರೈಲ್ವೆ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದು ಇಂದು ಹೊಸದಾಗಿ ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.

ಮೆಜೆಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕುಂದಾನಗರಿ ಬೆಳಗಾವಿಯ ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಿದರು. ಇದು ರೈಲ್ವೆ ಸಂಪರ್ಕದ ಹೊಸ ಯುಗದ ಆರಂಭವಾಗಿದ್ದು, ಬೆಳಗಾವಿ ಜನತೆಗೆ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಿಕ್ಕಂತಾಯಿತು.

ಇದೇ ಸಮಯದಲ್ಲಿ ಅಮೃತ್‍ಸರ್ ದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನಡುವಿನ ವಂದೇ ಭಾರತ್ ಪ್ರೆಸ್ ರೈಲಿಗೂ ವರ್ಚುವಲ್ ಮೂಲಕ ಪಿಎಂ ಮೋದಿ ಚಾಲನೆ ನೀಡಿದರು. ಪವಿತ್ರ ಮತ್ತು ಐತಿಹಾಸಿಕ ನಗರಗಳನ್ನು ವೇಗ ಹಾಗೂ ಸೌಕರ್ಯಗಳೊಂದಿಗೆ ಸಂಪರ್ಕಿಸುವ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ – ಅಮೃತಸರ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದ ರೈಲು ಸಂಪರ್ಕದಲ್ಲಿ ಒಂದು ಮೈಲಿಗಲ್ಲು. ಎಂದು ರೈಲ್ವೆ ತಿಳಿಸಿದೆ.

ನಾಗ್‍ಪುರ್ (ಅಜ್ನಿ) ಯಿಂದ ಪುಣೆಯ ವರೆಗೆ ಚಲಿಸಲಿರುವ  ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೂ ಸಹ  ವರ್ಚುವಲ್ ಮೂಲಕ ಪಿಎಂ ಮೋದಿ ಚಾಲನೆ ನೀಡಿದರು. ಇದನ್ನು ವೇಗದ ಪ್ರಯಾಣ, ಹೆಚ್ಚಿನ ಸೌಕರ್ಯ! ಎಂದು ಬಣ್ಣಿಸಿರುವ ರೈಲ್ವೆ ನಾಗ್ಪುರ (ಅಜ್ನಿ) – ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮಹಾರಾಷ್ಟ್ರದಾದ್ಯಂತ ಪ್ರಯಾಣವನ್ನು ಪರಿವರ್ತಿಸುತ್ತದೆ ಎಂದು ತಿಳಿಸಿದೆ.

ಈ ಸಮಯದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸೇರಿದಂತೆ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Comments (0)

Leave a Comment