ಬಾಳಿನ ವಿಕಾಸಕ್ಕೆ ಗುರಿ-ಗುರು ಮುಖ್ಯ; ರಂಭಾಪುರಿ ಶ್ರೀ

ಹೊಸಕೋಟೆ: ಸುಖ ಶಾಂತಿ ಬಯಸುವ ಮನುಷ್ಯ ಜೀವನದಲ್ಲಿ ಕೆಲವು ಆದರ್ಶ ಮೌಲ್ಯಗಳನ್ನು ಬೆಳೆಸಿಕೊಂಡು ಬರಬೇಕಾಗುತ್ತದೆ. ಬಾಳಿನ ವಿಕಾಸಕ್ಕೆ ಗುರಿ ಮತ್ತು ಗುರು ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ಎಚ್.ಜೆ.ಎಸ್.ಎಸ್. ಕನ್ವೆನ್‌ಷನ್ ಹಾಲ್‌ನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಇಷ್ಟಲಿಂಗ ಮಹಾಪೂಜಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮನುಷ್ಯ ಜೀವನದಲ್ಲಿ ಹಣ ಗಳಿಕೆಯಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನ ಮತ್ತು ಗುರು ಕಾರುಣ್ಯ ಪಡೆಯಲು ಶ್ರಮಿಸಬೇಕಾಗಿದೆ. ಭೌತಿಕ ಸಂಪತ್ತು ಶಾಶ್ವತವಲ್ಲ, ಅಧ್ಯಾತ್ಮ ಸಂಪತ್ತು ಬಾಳಿನ ನಿಜವಾದ ಸಂಪತ್ತೆಂಬುದನ್ನು ಮರೆಯಬಾರದು. ಪ್ರಾಣ ಯೌವನ ಕಾಲ ಒಮ್ಮೆ ಕಳೆದು ಹೋದರೆ ಮತ್ತೆಂದೂ ತಿರುಗಿ ಬರಲಾರವು. ಸದ್ದಿದ್ದೆ, ಉತ್ತಮ ಸಂಬಂಧ ಮತ್ತು ಆದರ್ಶ ಸ್ನೇಹ ಜೀವನ ಶ್ರೇಯಸ್ಸಿಗೆ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ಮೌಲ್ಯದ ಸಚಿಂತನೆಗಳು ಬದುಕಿ ಬಾಳುವ ಜನಸಮುದಾಯಕ್ಕೆ ಬೆಳಕು ತೋರುತ್ತವೆ. ಅವರು ಬೋಧಿಸಿದ ವಿಚಾರಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಹೊಸಕೋಟೆ ನಗರ ಇತಿಹಾಸದಲ್ಲಿ ಹಿಂದೆಂದೂ ಮಾಡದಿರುವ ಮಹತ್ಕಾರ್ಯವನ್ನು ತಾವೆಲ್ಲ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದೀರೆಂದು ಹರುಷ ವ್ಯಕ್ತಪಡಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಶರತ್ ಬಚ್ಚೇಗೌಡ, ಅಶಾಂತಿಯ ಬದುಕಿನಲ್ಲಿ ಸಮಾಧಾನ ಶಾಂತಿ ಕಾಣಬೇಕಾದರೆ ಧರ್ಮದ ಪರಿಪಾಲನೆ ಮಾಡಬೇಕಾಗುತ್ತದೆ. ಆಚಾರ್ಯರು, ಶರಣರು ಮತ್ತು ಮಹಾನುಭಾವರ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ಆಶಾಕಿರಣವಾಗಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ದೇವರು ಧರ್ಮ ಮತ್ತು ಗುರುವಿನಲ್ಲಿ ನಂಬಿಗೆ ಇಟ್ಟು ಬಾಳಬೇಕು. ನಂಬಿ ನಡೆದರೆ ಏನೆಲ್ಲ ಸೌಭಾಗ್ಯ ಪ್ರಾಪ್ತಿ. ನಂಬಿಗೆ ವಿಶ್ವಾಸ ಕಳೆದುಕೊಂಡರೆ ಬದುಕು ಬರಡಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಗಳು ನಮ್ಮೆಲ್ಲರಿಗೂ ದಾರಿದೀಪವೆಂದರು.

ನೇತೃತ್ವ ವಹಿಸಿದ ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ಭಾಗದ ಭಕ್ತರ ಬಹು ದಿನಗಳ ಕನಸು ನನಸಾದ ಸುದಿನ. ಶ್ರೀ ರಂಭಾಪುರಿ ಜಗದ್ಗುರುಗಳವರ ಶುಭಾಗಮನ ಈ ಭಾಗದ ಭಕ್ತರ ಸೌಭಾಗ್ಯವೆಂದರೆ ತಪ್ಪಾಗದು. ವಿವಿಧ ಸಂಘ ಸಂಸ್ಥೆಗಳ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು ಸಂತೋಷ ಉಂಟು ಮಾಡಿದೆ ಎಂದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಗುಮ್ಮಳಾಪುರದ ಶಿವಾನಂದ ಶಿವಾಚಾರ್ಯರು, ರಾಜಾಪುರ ಡಾ॥ ರಾಜೇಶ್ವರ ಶಿವಾಚಾರ್ಯರು ಹಾಗೂ ಬೆಳ್ಳಾವಿ ಮಹಾಂತ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಹೊಸಕೋಟೆ ನಗರದ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಎಂ.ಮಹೇಶ್ ಸ್ವಾಗತಿಸಿದರು. ಪ್ರಶಾಂತ ರಿಪ್ಪನ್ ಪೇಟೆ ನಿರೂಪಿಸಿದರು.

ಲೋಕ ಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಬೆಳಗ್ಗೆ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ 25 ವೀರಮಾಹೇಶ್ವರ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ ನೀಡಲಾಯಿತು. ಸಂಜೆ ನಗರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದು ಪುನೀತರಾದರು.

Related Articles

Comments (0)

Leave a Comment