ಸಿದ್ದರಾಮಯ್ಯ ಸಂಪುಟದಲ್ಲೇ ಮಂತ್ರಿಯಾಗ್ತಾರಾ ಶಿವಲಿಂಗೇಗೌಡ..?
- by Suddi Team
- July 27, 2025
- 8 Views

ಹಾಸನ: ರಾಜ್ಯ ಸಚಿವ ಸಂಪುಟ ಪುನಾರಚನೆಯಾದಲ್ಲಿ ಹಾಸನ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ, ಸಿಎಂ,ಡಿಸಿಎಂ ಹೇಳಿಕೆಗಳೇ ಇದಕ್ಕೆ ನಿದರ್ಶನವಾಗಿವೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ, ಶಿವಲಿಂಗೇಗೌಡರಿಗೆ ಮುಂದೆ ಉಜ್ವಲ ರಾಜಕೀಯ ಭವಿಷ್ಯವಿದೆ. ಅವರು ಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ.ಆದರೆ ಕೆಲವೊಂದು ರಾಜಕೀಯ ಸಂಗತಿಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಚಿವ ಸ್ಥಾನ ಸಿಗಲಿದೆ ಎನ್ನುವ ಸುಳಿವು ನೀಡಿದರು.
ಕ್ಷೇತ್ರದ ಜನಪರ ಅಭಿವೃದ್ಧಿ ಕೆಲಸ ಮಾಡುವುದರಲ್ಲೇ ಇರಲಿ, ವಿಧಾನಸಭೆಯಲ್ಲಿ ಪಕ್ಷ ಮತ್ತು ಸರ್ಕಾರದ ಜನಪರ ಕಾರ್ಯಗಳನ್ನು ಸಮರ್ಥವಾಗಿ ಮಂಡಿಸುವುದರಲ್ಲೂ ಮುಂದಿದ್ದಾರೆ, ಕ್ಷೇತ್ರದ ಜನರ ಆಶೀರ್ವಾದವೂ ಗಟ್ಟಿಯಾಗಿದೆ. ಈ ಕಾರಣಕ್ಕೇ ನಾಲ್ಕು ಬಾರಿ ಗೆದ್ದಿರುವ ಶಿವಲಿಂಗೇಗೌಡರು ಮುಂದಿನ ಬಾರಿಯೂ ಗೆದ್ದು ಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಶಿವಲಿಂಗೇಗೌಡರು ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮನೆ ಸುತ್ತಲು ನಾಲ್ಕು ಜೊತೆ ಚಪ್ಪಲಿ ಸವೆಸಿದ್ದಾರೆ. ಪ್ರತಿ ಬಾರಿ ಬಂದಾಗಲೂ ನಾನು ಕ್ಷೇತ್ರದ ಜನರ ಋಣ ತೀರಿಸಬೇಕು. ಈ ಯೋಜನೆಗಳಿಗಾಗಿ ನಾನು ದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನೀವು ನೆರವು ನೀಡಲೇಬೇಕು ಎಂದು ನಮ್ಮ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಅವರೊಬ್ಬರು ಮಾತ್ರ ಗೆದ್ದಿರಬಹುದು. ಮುಂದೆ 2028ರಲ್ಲಿ ಈ ಜಿಲ್ಲೆಯ 7ಕ್ಕೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಆತ್ಮವಿಶ್ವಾಸ ನನಗಿದೆ. ನಾವು ಮಾತು ಕೊಡುವುದು ಮುಖ್ಯವಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ. ಅದೇರೀತಿ ಶಿವಲಿಂಗೇಗೌಡರು ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.ಕನಕಪುರ, ವರುಣಾಗಿಂತ ಹೆಚ್ಚು ಕೆಲಸವನ್ನು ಶಿವಲಿಂಗೇಗೌಡರು ಅರಸೀಕರೆಯಲ್ಲಿ ಮಾಡಿಸುತ್ತಿದ್ದಾರೆ ಎಂದು ಹಾಡಿ ಹೊಗಳಿದರು.
Related Articles
Thank you for your comment. It is awaiting moderation.
Comments (0)