ಜಗತ್ತಿನ ವಿರೋಧ ಲೆಕ್ಕಿಸದೆ ಅಣ್ವಸ್ತ್ರ ಪರೀಕ್ಷೆ ವಾಜಪೇಯಿ ಸಾಧನೆ; ಬಿ.ಎಲ್ ಸಂತೋಷ್

ಬೆಂಗಳೂರು: ಪೋಖ್ರಾಣ್ ಅಣ್ವಸ್ತ್ರ ಸ್ಫೋಟ ಸಣ್ಣಪುಟ್ಟ ಘಟನೆಯಲ್ಲ,ಅಮೆರಿಕಾ ಸೇರಿದಂತೆ ಅಣ್ವಸ್ತ್ರ ಹೊಂದಿದ ರಾಷ್ಟ್ರಗಳ ವಿರೋಧವನ್ನು ಲೆಕ್ಕಿಸದೇ ಅಣುಬಾಂಬ್ ಸ್ಪೋಟ ಪರೀಕ್ಷೆಗೆ ಸಮ್ಮತಿಸಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ತಿಳಿಸಿದ್ದಾರೆ.

ನಗರದ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ದಲ್ಲಿ ಇಂದು ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ “ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸ್ಮರಣ ಸಂಚಿಕೆ ಲೋಕಾರ್ಪಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಪಾಕಿಸ್ತಾನದ ಜೊತೆ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ದ ಅಂತ ತೋರಿಸಿಕೊಟ್ಟವರು ವಾಜಪೇಯಿ, ಅಣುಬಾಂಬ್ ಪರೀಕ್ಷೆ ಮಾಡಿದಾಗ ಅಂದು ಅಮೆರಿಕ ವಿರೋಧ ಮಾಡಿತ್ತು. ಅಷ್ಟು ಮಾತ್ರವಲ್ಲದೇ ಇಡೀ ವಿಶ್ವವೇ ನಮ್ಮನ್ನ ವಿರೋಧ ಮಾಡುವ ಬೆದರಿಕೆ ಹಾಕಿದಾಗಲೂ ಜಗ್ಗದೆ ಇನ್ನು 2 ಬಾಂಬ್ ಪರೀಕ್ಷೆ ಮಾಡಿ ಅಂತ ಹೇಳಿದವರು ಅಟಲ್ ಅಂತ ನೆನಪಿಸಿಕೊಂಡರು.

ಅಟಲ್‍ ಅವರ ನೀತಿಗಳು ಡಿಜಿಟಲ್ ಯುಗಕ್ಕೆ ಕಾರಣವಾದವು. ಗ್ರಾಮ ಸಡಕ್ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದರು. ಅಸ್ಥಿರ ಸರಕಾರಗಳ ಯುಗದ ಬಳಿಕ ಸಮ್ಮಿಶ್ರ ಸರಕಾರದ ನೇತೃತ್ವವನ್ನು ಅಟಲ್‍ ಅವರು ವಹಿಸಿದ್ದರು. ಪಾಕಿಸ್ತಾನವನ್ನು ಮಣಿಸುವ ಕಾರ್ಯ ಕೂಡ ಅವರಿಂದ ಆಗಿತ್ತು ಎಂದರು.

ಸ್ವಾತಂತ್ರ್ಯಪೂರ್ವ- ಸ್ವಾತಂತ್ರ್ಯಾನಂತರದ ಕಾಂಗ್ರೆಸ್ಸಿಗೆ ಯಾವುದೇ ಸಂಬಂಧ ಇಲ್ಲ. ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ಸಿನಲ್ಲಿ ಎಲ್ಲರೂ ಇದ್ದರು. ಸ್ವಾತಂತ್ರ್ಯಾನಂತರದ ಕಾಂಗ್ರೆಸ್ಸಿನಲ್ಲಿ ಆ ಪಕ್ಷದಲ್ಲಿ ರಾಜಕಾರಣ ಮಾಡಲು ಆಸಕ್ತಿ ಉಳ್ಳವರು ಮಾತ್ರ ಉಳಿದಿದ್ದರು. ಆಗ ಜನರದು ಏಕಮುಖ ಶ್ರದ್ಧೆ ಇತ್ತು ಎಂದು ನುಡಿದರು.

297 ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ಅವರದೇ 4 ಜನರ ಹೆಸರು:

ವಿಮಾನನಿಲ್ದಾಣ ಇಂದಿರಾಗಾಂಧಿ, ಕ್ರಾಸ್ ರೋಡ್ ರಾಜೀವ್ ಗಾಂಧಿ, ಗಲ್ಲಿ ಜವಾಹರಲಾಲ್ ನೆಹರೂ, ಅಲ್ಲಿನ ಶೌಚಾಲಯಕ್ಕೆ ಅವರದೇ ಕುಟುಂಬದ ಇನ್ಯಾರದೋ ಹೆಸರು; ಇಂದಿರಾ ನಗರ, ರಾಜೀವ್ ನಗರ, 297 ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ಅವರದೇ 4 ಜನರ ಹೆಸರು ಇಡಲಾಗಿದೆ. 100ಕ್ಕಿಂತ ಜಾಸ್ತಿ ಯೋಜನೆಗಳಿಗೆ ಅವರದೇ ಹೆಸರು ಸ್ಮರಿಸಬೇಕಿದೆ. ದೇವರ ಹೆಸರು ಇಟ್ಟಿದ್ದರೆ ಸ್ಮರಣೆ ಮಾಡಿದರೆ ನಮಗೆ ಪುಣ್ಯವಾದರೂ ಬರುತ್ತಿತ್ತೇನೋ ಎಂದು ಬಿ.ಎಲ್. ಸಂತೋಷ ಅವರು ತಿಳಿಸಿದರು. ಆದರೆ, ವಾಜಪೇಯಿ, ಮೋದಿಯವರ ಹೆಸರಿನಲ್ಲಿ ಎಲ್ಲೂ ಯೋಜನೆಗಳಿಲ್ಲ; ನಮ್ಮ ಪ್ರಧಾನಿಗಳು, ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಹಾಕಿಕೊಂಡಿಲ್ಲ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಪುನರ್ ಪ್ರತಿಷ್ಠೆ ಮಾಡಲು, ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರಲು ನಾವು ನೀವೆಲ್ಲರೂ ಮತ್ತೆ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅಟಲ್, ಮೋದಿ ಮತ್ತಿತರ ನಾಯಕರ ಪ್ರೇರಣೆ ನಮಗಿರಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ಅಟಲ್‍ ಅವರದು ಅದ್ಭುತ ವ್ಯಕ್ತಿತ್ವ ಎಂದು ತಿಳಿಸಿದರು. ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ಭಾಷ್ಯ ಬರೆದವರು; ಅಧಿಕಾರವನ್ನು ಕಡೆಗಣಿಸಿ ತತ್ವ- ಸಿದ್ಧಾಂತಕ್ಕೆ ಅಟಲ್‍ ಅವರು ಒತ್ತು ಕೊಟ್ಟವರು ಎಂದು ವಿವರಿಸಿದರು.

Related Articles

Comments (0)

Leave a Comment