ರಾಜಣ್ಣ ಉಚ್ಚಾಟನೆ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕಾಂಗ್ರೆಸ್ ನ ಸಂಸ್ಕೃತಿಗೆ ನಿದರ್ಶನ; ವಿಜಯೇಂದ್ರ

ಬೆಂಗಳೂರು:ರಾಜಣ್ಣ ಸಚಿವ ಪದವಿಯಿಂದ ಉಚ್ಚಾಟಿತಗೊಂಡಿರುವುದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸಂಸ್ಕೃತಿ ಇನ್ನೂ ತೊಲಗಿಲ್ಲ, ಪರಿಶಿಷ್ಟ ಸಮುದಾಯದ ನಾಯಕರ ನಾಯಕತ್ವವನ್ನು ದಮನ ಮಾಡುವ ದಬ್ಬಾಳಿಕೆ ಇನ್ನೂ ನಿಂತಿಲ್ಲ ಎನ್ನುವುದನ್ನು ಸಾಕ್ಷೀಕರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯರ ಬಲಗೈ ಭಂಟರಾಗಿ ಕಾಂಗ್ರೆಸ್ ಪಕ್ಷದ ವೈಫಲ್ಯಗಳು ಹಾಗೂ ಆಂತರಿಕ ದಬ್ಬಾಳಿಕೆಗಳನ್ನು ನಿಷ್ಟೂರವಾಗಿ ಬಿಚ್ಚಿಡುತ್ತಿದ್ದ ರಾಜಣ್ಣ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದರು ಹಾಗಾಗಿ ಅವರ ವಿರುದ್ಧ ಕ್ರಮವಾಗಿದೆ. ಚುನಾವಣಾ ಆಯೋಗದ ವಿರುದ್ಧ ಬಾಲಿಶತನದ ಆರೋಪ ಮಾಡುವ ಮೂಲಕ ನಗೆ ಪಾಟಲಿಗೀಡಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದ್ಯ ಹತಾಶ ಮನಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ‘ಇದ್ದಿದ್ದು ಇದ್ದಂಗೆ ಹೇಳಿ’ ಕಾಂಗ್ರೆಸ್ ದೋಷಗಳಿಗೆ ಕನ್ನಡಿ ಹಿಡಿದ ಹಿರಿಯ ಸಚಿವ ಕೆ.ಎನ್ ರಾಜಣ್ಣ ಅವರ ತಲೆದಂಡವಾಗಿದೆ ಎಂದಿದ್ದಾರೆ.

‘ಕೈ’ ವರಿಷ್ಠ ನೇತಾರ ರಾಹುಲ್ ಗಾಂಧಿಯವರ ಎಡಬಿಡಂಗಿ ನಡೆಯನ್ನು ಎತ್ತಿ ತೋರಿಸಿದ ಪರಿಶಿಷ್ಟ ಪಂಗಡ ಹಾಗೂ ಶೋಷಿತ ಸಮುದಾಯಗಳ ಪರವಾಗಿ ದನಿಯಾಗಿದ್ದ ಕೆ ಎನ್ ರಾಜಣ್ಣ ನವರು ಸಚಿವ ಪದವಿಯಿಂದ ಉಚ್ಚಾಟಿತಗೊಂಡಿರುವುದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸಂಸ್ಕೃತಿ ಇನ್ನೂ ತೊಲಗಿಲ್ಲ, ಪರಿಶಿಷ್ಟ ಸಮುದಾಯದ ನಾಯಕರ ನಾಯಕತ್ವವನ್ನು ದಮನ ಮಾಡುವ ದಬ್ಬಾಳಿಕೆ ಇನ್ನೂ ನಿಂತಿಲ್ಲ ಎನ್ನುವುದನ್ನು ಸಾಕ್ಷೀಕರಿಸಿದೆ. ಸಧ್ಯ ಕೆ.ಎನ್.ರಾಜಣ್ಣನವರ ಮೂಲಕ ಮೊದಲ ವಿಕೆಟ್ ಪತನವಾಗಿದೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ವ್ಯಾಖ್ಯಾನಿಸಿದರು.

ಮತಗಳ್ಳತನದ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರ ಅಪ್ರಬುದ್ಧ ನಡೆಯನ್ನು  ವಿಶ್ಲೇಷಿಸಿ ಕಾಂಗ್ರೆಸ್ ಪಕ್ಷದ್ದೇ ತಪ್ಪು, “2024 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಲೋಕಸಭಾ ಚುನಾವಣೆಗೂ ಮುಂಚೆಯೇ ಮತದಾರರ ಪಟ್ಟಿಯನ್ನು ಪರಿಶೀಲಿಸುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯಾಗಿತ್ತು, ಚುನಾವಣಾ ಸಂದರ್ಭದಲ್ಲಿ ಬೂತ್ ಕಾರ್ಯಕರ್ತರು ಇದನ್ನು ಗಮನಿಸುವಂತೆ ಪಕ್ಷ ನೋಡಿಕೊಳ್ಳಬೇಕಿತ್ತು, ಮತದಾನದಂದು ಕಾಂಗ್ರೆಸ್ ಪಕ್ಷದ ಏಜೆಂಟರುಗಳು ಲೋಪಗಳಿದ್ದರೆ ಗಮನಿಸುವಂತೆ ತರಬೇತಿ ನೀಡಬೇಕಾಗಿತ್ತು, ಚುನಾವಣೆಯ ನಂತರವೂ ದೂರು ಸಲ್ಲಿಸಬೇಕಾಗಿತ್ತು, ಇದ್ಯಾವುದನ್ನೂ ಮಾಡದೆ ಏಕಾಏಕಿ ಈಗ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಲು ಹೊರಟಿರುವ ಕ್ರಮ ಸರಿಯಲ್ಲ” ಎಂದು ರಾಜಣ್ಣ ಹೇಳಿದ್ದರು. ಇದನ್ನೇ ನಾಡಿನ ಪ್ರಮುಖ ಪತ್ರಿಕೆಗಳು ತಮ್ಮ ಸಂಪಾದಕೀಯದಲ್ಲೂ ಉಲ್ಲೇಖಿಸಿವೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಬೇಜವಾಬ್ದಾರಿತನ, ಕ್ಷುಲ್ಲಕ ರಾಜಕೀಯ ನಡೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುದಕ್ಕಾಗಿ ವಿತಂಡ ವಿರೋಧ ಮಾಡುವುದು, ಇದಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೂ ಆರೋಪ ಹೊರಿಸುವುದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಇತ್ತೀಚಿನ ನಡವಳಿಕೆಯಾಗಿದೆ. ಇದನ್ನು ಪ್ರಶ್ನಿಸುವ ಕಾಂಗ್ರೆಸ್ ಪಕ್ಷದ ಕಾಳಜಿಯ ನಾಯಕರುಗಳನ್ನು ಮೂಲೆಗೆ ಸೇರಿಸುವ ತುಘಲಕ್ ದರ್ಬಾರ್ ಆರಂಭವಾಗಿದೆ ಎಂದರು.

ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ, ಎನ್ನುವುದು ಇತ್ತೀಚಿನ ಕರ್ನಾಟಕ ಸರ್ಕಾರದ ನಿರ್ಧಾರಗಳನ್ನು ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಪ್ರಕಟಿಸುತ್ತಿರುವುದು ಸ್ಪಷ್ಟವಾಗಿದೆ. ರಾಜಣ್ಣನವರು ಈ ಹಿಂದೆ ಹೇಳಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಸೆಪ್ಟಂಬರ್ ಕ್ರಾಂತಿ ಮುಂಚಿತವಾಗಿಯೇ ಆರಂಭವಾಗಿದೆ, ಕ್ರಾಂತಿಯ ಕಿಡಿ ಯಾರನ್ನಾದರೂ ಬಲಿತೆಗೆದು ಕೊಳ್ಳಲಿ ಆದರೆ ಸದ್ಯ ಈಗಾಗಲೇ ಸೊರಗಿರುವ ಕರ್ನಾಟಕವನ್ನು ಸುಡದಿರಲಿ ಎಂದಿದ್ದಾರೆ.

ಸ್ವಾರ್ಥದ ಅಟ್ಟಹಾಸ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸರಣೀ ಹಗರಣಗಳನ್ನು ಕತ್ತಿಗೆ ಸುತ್ತಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಜನರ ಹಿತವನ್ನು ಮರೆತು ಪಕ್ಷ ಹಾಗೂ ಅಧಿಕಾರದ ಸುತ್ತ ಗಮನವನ್ನು ಕೇಂದ್ರೀಕರಿಸಿ ರಾಜ್ಯ ಹಾಗೂ ರಾಜ್ಯದ ಜನರ ಹಿತಾಸಕ್ತಿಯನ್ನು ಸಂಪೂರ್ಣ ಮರೆತಿದೆ. ಕಾಂಗ್ರೆಸ್ ಅಧಿಕಾರಕ್ಕೆ ತಂದ ಕಾರಣಕ್ಕಾಗಿ ಜನ ಶಪಿಸುತ್ತಿದ್ದಾರೆ ಇದರ ನಡುವೆ ದಮನಿತ ಸಮುದಾಯದ ನಾಯಕರನ್ನೂ ರಾಜಕೀಯವಾಗಿ ಮುಗಿಸುವ ಷಡ್ಯಂತ್ರದಿಂದ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡವನ್ನು ಜನ ಮತ್ತೊಮ್ಮೆ ತಿಳಿಯುವಂತಾಗಿದೆ ಎಂದಿದ್ದಾರೆ.

Related Articles

Comments (0)

Leave a Comment