ವಕೀಲರ ಸಂಘಕ್ಕೆ 10 ಎಕರೆ ಜಾಗ,5ಕೋಟಿ ಅನುದಾನ; ಡಿಕೆ ಶಿವಕುಮಾರ್
- by Suddi Team
- July 11, 2025
- 1 Views
ಬೆಂಗಳೂರು:“ವಕೀಲರ ಸಂಘಕ್ಕೆ ಪ್ರತಿ ವರ್ಷ ರೂ.5 ಲಕ್ಷವನ್ನು ಕೆಂಪೇಗೌಡ ಜಯಂತಿ ಆಚರಣೆಗೆ ನೀಡಲಾಗುವುದು. ಸಂಘದ ಉಪಯೋಗಕ್ಕಾಗಿ ರೂ.5 ಕೋಟಿಯನ್ನು ಜಿಬಿಎಯಿಂದ ನೀಡಲಾಗುವುದು. ಕೆಂಪೇಗೌಡ ಪ್ರಶಸ್ತಿಯನ್ನು ಕಡ್ಡಾಯವಾಗಿ ಇಬ್ಬರು ವಕೀಲರಿಗೆ ಪ್ರತಿವರ್ಷ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
ಬೆಂಗಳೂರು ವಕೀಲರ ಸಂಘದಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ” ಈ ಸಂಸ್ಥೆಗೆ ಭೂಮಿ ಬೇಕು ಎಂದು ಹೇಳಿದ್ದೀರಿ. ಆದ ಕಾರಣಕ್ಕೆ 10 ಎಕರೆ ಕಂದಾಯ ಭೂಮಿಯನ್ನು ಲಭ್ಯತೆ ನೋಡಿಕೊಂಡು ನೀಡಲಾಗುವುದು. ನಗರದ 20 ಕಿಮೀ ವ್ಯಾಪ್ತಿಯಲ್ಲಿ ಭೂಮಿ ಇದ್ದರೆ ನೀವೆ ಹುಡುಕಿ. ನಾವು ನೀಡುವ ಹಣವನ್ನು ನಿಮಗೆ ಉಪಯೋಗವಾಗುವ ಉತ್ತಮ ಕೆಲಸಗಳಿಗೆ ವಿನಿಯೋಗಿಸಿ” ಎಂದು ಸಲಹೆ ನೀಡಿದರು.
“ವಕೀಲರ ಬಳಿ ನ್ಯಾಯ ಕೊಡಿಸಿ ಎಂದು ಜನರು ಬರುತ್ತಾರೆ. ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಬೇಕು. ನಿಮ್ಮ ಬಳಿ ಬಂದ ಕಕ್ಷಿದಾರನಿಗೆ ಸಂತೋಷವಾಗುವಂತೆ ಕೆಲಸ ಮಾಡಬೇಕು. ಕಪ್ಪು ಕೋಟು ಹಾಕಿದ್ದೇನೆ ಎಂದು ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನಿಮ್ಮ ಹಾಗೂ ಪೊಲೀಸರ ನಡುವೆ ಆಗಾಗ್ಗೆ ಸಂಘರ್ಷವಾಗುತ್ತಾ ಇರುತ್ತಾರೆ. ಈ ಪೋಲೀಸರು ಮೈಮೇಲೆ ಖಾಕಿ ಬಂದ ತಕ್ಷಣ ದೇವರು ಬಂದಂತೆ ಆಡುತ್ತಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
“ಕೆಂಪೇಗೌಡ ಜಯಂತಿ, ಪ್ರಾಧಿಕಾರ ಪ್ರಾರಂಭ ಮಾಡಿದವರೇ ನಾವು. ಪ್ರತಿ ಊರಿನಲ್ಲೂ ಕೆಂಪೇಗೌಡ ಜಯಂತಿ ಮಾಡಬೇಕು ಎಂದು ಹೇಳಿದವರು ನಾವೇ. ಬೆಂಗಳೂರು ನಗರ ಅಭಿವೃದ್ದಿ ಇಲಾಖೆಯನ್ನು ಛಲದಿಂದ ತೆಗೆದುಕೊಂಡಿದ್ದೇನೆ. ಈ ನಗರದ ಬಗ್ಗೆ ನನ್ನದೇ ಆದ ಕನಸುಗಳಿವೆ. ತಿಹಾರ್ ಜೈಲಿನಿಂದ ಹೊರಗೆ ಬಂದಾಗ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ನಾನು ಹುಟ್ಟುತ್ತಾ ಕೃಷಿಕ, ನಂತರ ಉದ್ಯಮಿ, ಆಕಸ್ಮಿಕವಾಗಿ ಶಿಕ್ಷಣ ಪ್ರೇಮಿ, ಆಯ್ಕೆಯಿಂದ ರಾಜಕಾರಣಿ. ರಾಜಕಾರಣಿ ಆಗಲೇ ಬೇಕು ಎಂದು ಶಾಲಾ ದಿನಗಳಲ್ಲೇ ಕನಸು ಕಂಡವನು. ಅಲ್ಲಿಂದ ಸಂಘಟನೆ ಮಾಡಿಕೊಂಡು ಬೆಳೆಸಿದ್ದೇನೆ” ಎಂದು ಹೇಳಿದರು.
“ನಮ್ಮ ತಂದೆ, ತಾತನ ಹೆಸರು ಕೆಂಪೇಗೌಡ ಎಂದಿದೆ. ನನ್ನ ಮಗನ ಹೆಸರು ಆಕಾಶ್ ಕೆಂಪೇಗೌಡ, ತಮ್ಮನ ಹೆಸರೂ ಸಹ ಕೆಂಪೇಗೌಡ ಎಂದಿತ್ತು ಆನಂತರ ಸುರೇಶ್ ಎಂದು ಮಾಡಿಕೊಂಡ. ಶಿವನಿಗೆ ಹರಕೆ ಮಾಡಿಕೊಂಡು ನನಗೆ ಶಿವಕುಮಾರ್ ಎಂದು ಹೆಸರಿಟ್ಟರು. ಈ ಇತಿಹಾಸ ನನಗೆ ಗೊತ್ತಿಲ್ಲ” ಎಂದು ಹೇಳಿದರು.
“ನನ್ನ ತಂದೆಗೆ ನನ್ನನ್ನು ಎಂಜಿನಿಯರ್ ಮಾಡಬೇಕು ಎನ್ನುವ ಆಸೆ. ಆದರೆ ನನಗೆ ವಕೀಲನಾಗುವ ಆಸೆ. ಚಿನ್ನ, ಬೆಳ್ಳಿ ಮನೆಯಲ್ಲಿಯೇ ಇರುವುದು ಸಾಮಾನ್ಯ. ತುರ್ತು ಪರಿಸ್ಥಿತಿ ಸಮಯದಲ್ಲಿ ನಮ್ಮ ಮನೆ ಮೇಲೆ ಅಧಿಕಾರಿಗಳು ರೈಡ್ ಮಾಡಿದ್ದರು. ರೈಡ್ ಮಾಡಿದ ಅಧಿಕಾರಿ ಎಂಜಿನಿಯರ್. ಅದಕ್ಕೆ ನಮ್ಮ ತಂದೆಗೆ ಓದಿಸಬೇಕು ಎನ್ನುವ ಛಲ. ಆದರೆ ಅವರ ಆಸೆ ಕೈಗೂಡಲಿಲ್ಲ” ಎಂದರು.
“ನಾನು ಕೊನೆಯ ವರ್ಷದ ಪದವಿ ಓದುವಾಗಲೇ ದೇವೇಗೌಡರ ವಿರುದ್ದ ಚುನಾವಣೆಗೆ ನಿಲ್ಲುವ ಅವಕಾಶ ಬಂದಿತು. ನಾನು ಎಂಜಿನಿಯರ್ ಆಗಲು ಸಾಧ್ಯವಾಗಲಿಲ್ಲ. ಆದರೆ ಗ್ಲೋಬಲ್ ಅಕಾಡೆಮಿ ಎನ್ನುವ ತಾಂತ್ರಿಕ ವಿದ್ಯಾಲಯ ಪ್ರಾರಂಭ ಮಾಡಿದ್ದೇನೆ. ನೂರಾರು ಜನ ಎಂಜಿನಿಯರ್ ಗಳನ್ನು ತಯಾರು ಮಾಡುತ್ತಿದ್ದೇನೆ. ನನಗೆ ವಕೀಲನಾಗುವ ಅವಕಾಶ ಸಿಗಲಿಲ್ಲ ಅದಕ್ಕೆ ಮಗನನ್ನು ವಕೀಲನನ್ನಾಗಿ ಮಾಡಿದ್ದೇನೆ” ಎಂದರು.
“ನಾನು 29 ವರ್ಷಕ್ಕೆಲ್ಲಾ ಮಂತ್ರಿಯಾದೆ. ಚಿಕ್ಕ ವಯಸ್ಸಿಗೆ ನನಗೆ ಹೆಚ್ಚು ಜವಾಬ್ದಾರಿಗಳು ಹೆಗಲ ಮೇಲೆ ಬಂದವು. ಸದನದಲ್ಲಿ ಘಟಾನುಘಟಿ ನಾಯಕರು ಇದ್ದರು. ವೈ.ಕೆ.ರಾಮಯ್ಯ, ಎ.ಕೆ.ಸುಬ್ಬಯ್ಯ ಅವರು, ನಂಜೇಗೌಡರು ಸೇರಿದಂತೆ ಅನೇಕ ನಾಯಕರ ಮಾತುಗಳನ್ನು ಕೇಳುತ್ತಿದ್ದೆನು. ನನಗೆ ತಲೆ ಸೀಳಿದರೆ ಅಕ್ಷರ ಇರಲಿಲ್ಲ. ನಾನು ಮಾತನಾಡುವುದೆಲ್ಲವು ನನ್ನ ಅನುಭವದ ಮಾತುಗಳು. ಜೀವನದಲ್ಲಿ ಅನುಭವವೇ ಮುಖ್ಯ” ಎಂದು ಹೇಳಿದರು.
“ಸನ್ಮಾನ ಮಾಡಿದಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ ಆದ ಕಾರಣ ನಾನು ಇದುವರೆಗು ಪ್ರಶಸ್ತಿ ತೆಗೆದುಕೊಳ್ಳಲು ನಾನು ಹೋಗಿಲ್ಲ. ನಾನು ಚಿತ್ರನಟಿ ಪ್ರೇಮಾ ಅವರ ದೊಡ್ಡ ಅಭಿಮಾನಿ. ಅವರು ಕಾರ್ಯಕ್ರಮದಲ್ಲಿ ನಮ್ಮನ್ನು ನಗಿಸುತ್ತಾರೆ ಎಂದುಕೊಂಡೆ ಏಕೋ ನಮ್ಮನ್ನೆಲ್ಲ ನಗಿಸಲಿಲ್ಲ” ಎಂದು ಹಾಸ್ಯ ಚಟಾಕಿ ಹಾರಿಸಿದರು.
“ಧಾರವಾಡ ಪೀಠವಾಗಬೇಕು ಎಂದು ಹೋರಾಟ ಮಾಡುತ್ತಿದ್ದರು. ಆಗ ನಾನು ಹಿರಿಯ ವಕೀಲರನ್ನು ಕೇಳಿದರೆ ಅವರೆಲ್ಲರೂ ಇಲ್ಲೇ ಇರಲಿ ಎಂದು ಹೇಳುತ್ತಿದ್ದರು. ಈಗ ಅಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತಿದೆ. ಈ ನಗರದಲ್ಲಿ ಇರುವ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ದೇಶದಲ್ಲಿ ಎಲ್ಲಿಯೂ ಇಲ್ಲ. ದೇಶದ ಅತ್ಯುತ್ತಮ ಸಂಸ್ಥೆಗಳು ಇಲ್ಲಿಯೇ ಏಕೆ ಸ್ಥಾಪನೆ ಮಾಡಲಾಯಿತು. ದೇಶದ ಅನೇಕ ಪ್ರತಿಷ್ಟಿತ ಜನರು೦ ಓದಿದ್ದು ಇಲ್ಲಿಯೇ” ಎಂದರು.
“ಬೆಂಗಳೂರಿನ ವಕೀಲರ ಸಂಘ 25 ಸಾವಿರ ಸದಸ್ಯತ್ವ ಹೊಂದಿದೆ ಎಂದು ಕೇಳಲ್ಪಟ್ಟೆ. ನೀವು ಮನಸ್ಸು ಮಾಡಿದರೆ ಬೆಂಗಳೂರಿನಲ್ಲಿ ಯಾವ ಪಕ್ಷವನ್ನು ಕೂಡ ಅಧಿಕಾರಕ್ಕೆ ತರಬಹುದು, ಬೀಳಿಸಬಹುದು” ಎಂದರು.
ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಚಿತ್ರನಟಿ ಪ್ರೇಮಾ, ಪ್ರೊ. ಎಂ. ಕೃಷ್ಣೇಗೌಡ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್. ಗಿರೀಶ್ ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)