ಕಳ್ಳತನ ತಪ್ಪಿಸಲು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಿ: ದಯಾನಂದ್ ಮನವಿ

ಬೆಂಗಳೂರು: ಸಾರ್ವಜನಿಕರು ತಮ್ಮ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಬಾಗಿಲು, ಕಿಟಕಿ, ಗೇಟ್‌ಗಳಿಗೆ ಬಿಗಿಯಾದ ಲಾಕ್ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಮತ್ತು ನೆರೆಹೊರೆಯವರ ಗಮನಕ್ಕೆ ತರುವುದು ಸೇರಿದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮನವಿ ಮಾಡಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು, ಆರೋಪಿಯಿಂದ 188 ಗ್ರಾಂ ಚಿನ್ನಾಭರಣ, 550 ಗ್ರಾಂ ಬೆಳ್ಳಿಯ ವಸ್ತುಗಳು, ₹1,500 ನಗದು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ₹16,50,000/- ಆಗಿದೆ. ಈ ಬಂಧನದೊಂದಿಗೆ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 9 ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ‌ ಎಂದರು.

ಹೆಚ್.ಎ.ಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ. ಅವರಿಂದ ಒಟ್ಟು 550 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ ರೂ.50,00,000/- ಆಗಿದೆ. ಅದರಲ್ಲಿ ಆರೋಪಿಯೋರ್ವನ ನಿವಾಸದಿಂದ 100 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಅಮೃತಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ (ಕ್ರಿಸ್ಟಲ್) ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿದ್ದು, ಆತನಿಂದ ಸುಮಾರು ₹3 ಕೋಟಿ ಮೌಲ್ಯದ 3 ಕೆ.ಜಿ ಎಂಡಿಎಂಎ ಕ್ರಿಸ್ಟಲ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.ಮಾದಕವಸ್ತು ಜಾಲವನ್ನು ನಿರ್ಮೂಲನೆ ಮಾಡಲು ಬೆಂಗಳೂರು ನಗರ ಪೊಲೀಸರು ಬದ್ಧರಾಗಿದ್ದಾರೆ. ಮಾದಕವಸ್ತು ಸಂಬಂಧಿತ ಯಾವುದೇ ಚಟುವಟಿಕೆಗಳು ನಿಮ್ಮ ಗಮನಕ್ಕೆ ಬಂದರೆ, ಸಹಾಯವಾಣಿ 1908ಕ್ಕೆ ಕರೆಮಾಡಿ ಮಾಹಿತಿ ನೀಡಿ ಎಂದರು.

ಬೇಗೂರು ಪೊಲೀಸ್ ಠಾಣೆಯ ಪೊಲೀಸರು ಮನೆ ಕಳವು ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 53 ಗ್ರಾಂ ಚಿನ್ನಾಭರಣಗಳು ಮತ್ತು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಸ್ತುಗಳ ಒಟ್ಟು ಮೌಲ್ಯ ₹6,50,000/- ಆಗಿದೆ. ಈ ಬಂಧನದೊಂದಿಗೆ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 6 ಕಳ್ಳತನ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.

ಸಾರ್ವಜನಿಕರು ತಮ್ಮ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಬಾಗಿಲು, ಕಿಟಕಿ, ಗೇಟ್‌ಗಳಿಗೆ ಬಿಗಿಯಾದ ಲಾಕ್ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಮತ್ತು ನೆರೆಹೊರೆಯವರ ಗಮನಕ್ಕೆ ತರುವುದು ಸೇರಿದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸರು ಮನವಿ ಮಾಡಿದರು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ತಕ್ಷಣವೇ Namma 112 ಗೆ ಕರೆ ಮಾಡಿರಿ ಎಂದು ಮನವಿ ಮಾಡಿದರು.

“ವಿಶ್ವ ಧೂಮಪಾನ ನಿಷೇಧ ದಿನ (31 ಮೇ 2025)”ದ ಅಂಗವಾಗಿ ಕೈಗೊಳ್ಳಲಾಗುತ್ತಿರುವ ನಗರಮಟ್ಟದ ವಿಶೇಷ ಕಾರ್ಯಚಟುವಟಿಕೆಗಳ ವಿವರ ನೀಡಿದರು. “ಆರೋಗ್ಯಕರ ಬೆಂಗಳೂರಿಗಾಗಿ ನಾವು ಬದ್ಧರಾಗಿದ್ದೇವೆ. ಅಕ್ರಮ ತಂಬಾಕು ಸೇವನೆ, ವೇಪಿಂಗ್, ಹುಕ್ಕಾ ಬಳಕೆಯ ವಿರುದ್ಧದ ಕಠಿಣ ಕ್ರಮಗಳು ಹಾಗೂ ವ್ಯಾಪಾರಿಗಳಲ್ಲಿ ಲೈಸೆನ್ಸ್ ಜಾಗೃತಿ ಕಾರ್ಯಚಟುವಟಿಕೆಗಳು ತಂಬಾಕು ಮುಕ್ತ ವಾತಾವರಣ ನಿರ್ಮಾಣಕ್ಕೆ ನೆರವಾಗಲಿವೆ. ಸಾರ್ವಜನಿಕರು ಮತ್ತು ವ್ಯಾಪಾರಿಗಳು ಕಾನೂನು ಪಾಲನೆಗಾಗಿ ಪೊಲೀಸರೊಂದಿಗೆ ಸಹಕರಿಸಬೇಕು,” ಎಂದು ನಗರ ಪೊಲೀಸ್ ಆಯುಕ್ತರು ಹೇಳಿದರು.

Related Articles

Comments (0)

Leave a Comment