ಲೋಕಸಭೆಯಲ್ಲಿ ತಮಿಳುನಾಡಿನ ಪಾಲು ಕಡಿತಕ್ಕೆ ಅವಕಾಶ ನೀಡಲ್ಲ: ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಎಚ್ಚರಿಕೆ!
- by Suddi Loka
- November 27, 2026
- 18 Views
ಚೆನ್ನೈ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆಯಾಗಲು ಬಿಡುವುದಿಲ್ಲ. ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಲೋಕಸಭೆಯಲ್ಲಿ ತಮಿಳುನಾಡಿನ ಪ್ರಸ್ತುತ ಶೇ.7.18ರಷ್ಟು ಸ್ಥಾನಗಳ ಪಾಲನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಕ್ಷೇತ್ರಗಳ ಮರುವಿಂಗಡಣೆಯ ದುಷ್ಪರಿಣಾಮಗಳ ಬಗ್ಗೆ ದೇಶದಲ್ಲೇ ಮೊದಲು ಧ್ವನಿ ಎತ್ತಿದ್ದು ಡಿಎಂಕೆ ಎಂದು ತಿಳಿಸಿದ್ದಾರೆ.

ಲೋಕಸಭಾ ಸ್ಥಾನಗಳ ಒಟ್ಟು ಸಂಖ್ಯೆ ಹೆಚ್ಚಿಸಿದರೂ ತಮಿಳುನಾಡಿನ ಪಾಲು ಉಳಿಸಬೇಕು. 1971ರ ಜನಗಣತಿ ಆಧಾರಿತ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯದ ಪ್ರಮಾಣವನ್ನು ಮುಂದಿನ 25 ವರ್ಷಗಳವರೆಗೆ ಬದಲಾಯಿಸಬಾರದು ಎಂಬುದು ಪಕ್ಷದ ಪ್ರಮುಖ ಬೇಡಿಕೆಗಳಾಗಿವೆ.
ಅಧಿಕಾರಕ್ಕಾಗಿ ತತ್ವಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ತಮಿಳುನಾಡಿನ ಹಿತಾಸಕ್ತಿ ಮತ್ತು ಪಕ್ಷದ ಸಿದ್ಧಾಂತಗಳ ವಿಚಾರದಲ್ಲಿ ಡಿಎಂಕೆ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಸ್ಟಾಲಿನ್ ಪುನರುಚ್ಚರಿಸಿದ್ದಾರೆ.


Comments (0)