ನಿರ್ಮಾಣ ಉಪಕರಣಗಳ ಉತ್ಪಾದನೆಗೆ ₹11,000 ಕೋಟಿ ಯೋಜನೆಗೆ ಸಂಪುಟ ಅನುಮೋದನೆ
- by Suddi Loka
- November 26, 2026
- 4 Views
ನವದೆಹಲಿ: ಭಾರತದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (CIE) ಉತ್ಪಾದನಾ ವಲಯವನ್ನು ಬಲಪಡಿಸಿ, ಆಮದು ಅವಲಂಬನೆ ಕಡಿಮೆ ಮಾಡುವ ಉದ್ದೇಶದ ₹11,000 ಕೋಟಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
ಭಾರೀ ಕೈಗಾರಿಕೆಗಳ ಸಚಿವಾಲಯ ಜಾರಿಗೊಳಿಸಲಿರುವ ಈ ಯೋಜನೆ 2026-27ನೇ ಸಾಲಿನಿಂದ ಎಂಟು ವರ್ಷಗಳ ಕಾಲ ಅನುಷ್ಠಾನಗೊಳ್ಳಲಿದೆ. ಹಡಗಿನಿಂದ ದಡಕ್ಕೆ ಸರಕು ಸಾಗಿಸುವ ಕ್ರೇನ್‌ಗಳು, ಸುರಂಗ ಕೊರೆಯುವ ಯಂತ್ರಗಳು, ಹೈಡ್ರಾಲಿಕ್ ಎಕ್ಸ್‌ಕವೇಟರ್‌ಗಳು ಮತ್ತು ಆಫ್-ಹೈವೇ ಟ್ರಕ್‌ಗಳಂತಹ ಸುಧಾರಿತ ಉಪಕರಣಗಳ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಪರೀಕ್ಷಾ ಸೌಲಭ್ಯವನ್ನೂ ಸ್ಥಾಪಿಸಲಾಗುವುದು.

ಯೋಜನೆಯಡಿ ಮೂಲ ಉಪಕರಣ ತಯಾರಕರು (OEMs) ಮತ್ತು ಬಿಡಿಭಾಗ ತಯಾರಕರಿಗೆ ಐದು ವರ್ಷಗಳ ಅವಧಿಯಲ್ಲಿ ಹೆಚ್ಚುವರಿ ಮಾರಾಟದ ಮೇಲೆ ಶೇ.13ರಿಂದ ಶೇ.8ರವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಪರೀಕ್ಷಾ ಸೌಲಭ್ಯ ಸ್ಥಾಪನೆಗೆ ₹375 ಕೋಟಿವರೆಗೆ ಅನುದಾನ ಒದಗಿಸಲಾಗುತ್ತದೆ.
ಭಾರತದ CIE ಉದ್ಯಮವು ಚೀನಾ ಮತ್ತು ಅಮೆರಿಕದ ನಂತರ ವಿಶ್ವದ ಮೂರನೇ ಅತಿದೊಡ್ಡ ಉದ್ಯಮವಾಗಿದೆ. 2024-25ರಲ್ಲಿ ಇದರ ಮಾರುಕಟ್ಟೆ ಗಾತ್ರ ಸುಮಾರು ₹97,500 ಕೋಟಿಯಷ್ಟಿದ್ದು, 2029-30ರ ವೇಳೆಗೆ ₹2.28 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ.


Comments (0)