ಸಿನಿಮಾ ಪ್ರಮೋಷನ್ಗೆ ಬಾರದ ಆರೋಪ; ನಟಿ ರಚಿತಾ ರಾಮ್ ಹೇಳೋದೇನು ಗೊತ್ತಾ?
- by Suddi Team
- June 21, 2025
- 469 Views
ಬೆಂಗಳೂರು: “ಇವರ ಸಿನಿಮಾ ಶೂಟಿಂಗ್ ಇದ್ದಾಗ ಬೇರೆ ಸಿನಿಮಾ ಪ್ರಮೋಷನ್ಗೆ ಒಂದೇ ಒಂದು ದಿನವೂ ಕಳಿಸದೆ, ಈಗ ಇವರ ಸಿನಿಮಾ ಪ್ರಮೋಷನ್ಗೆ ಬರುತ್ತಿಲ್ಲ ಎನ್ನುವ ಆರೋಪ ಮಾಡುತ್ತಿದ್ದಾರೆ” – ಇದು ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಮೋಷನ್ ವಿವಾದದ ಕುರಿತು ನಟಿ ರಚಿತಾ ರಾಮ್ ನೀಡಿರುವ ಸ್ಪಷ್ಟೀಕರಣ.
ಸೋಷಿಯಲ್ ಮೀಡಿಯಾ ಮೂಲಕ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ರಚಿತಾ ರಾಮ್, ಸಂಜು ವೆಡ್ಸ್ ಗೀತಾ-2 ಚಿತ್ರ ತಂಡದವರು ನನ್ನ ಬಗ್ಗೆ ತುಂಬ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಮಾಧ್ಯಮಗಳ ಮುಂದೆ ನನ್ನನ್ನು ಹೊಗಳಿದ್ದ ತಂಡವೇ ಇಂದು ಟೀಕಿಸುತ್ತಿದೆ. ವಾಸ್ತವವಾಗಿ ಸಂಜು ವೆಡ್ಸ್ ಗೀತಾ-2 ಶೂಟಿಂಗ್ ನಡೆಯುವಾಗ ನನ್ನ ಇನ್ನೊಂದು ಸಿನಿಮಾ ರಿಲೀಸ್ಗೆ ರೆಡಿ ಇತ್ತು. ಆ ಟೀಂ ಪ್ರಮೋಷನ್ ಮಾಡಲು ಆಗಮಿಸುವಂತೆ ಕರೆಯಿತು. ಈ ಕುರಿತು ನಾನು ನಾಗಶೇಖರ್, ಕಿಟ್ಟಿ ಜತೆ ಮಾತಾಡಿದೆ. ಆದರೆ, ಒಂದೇ ಒಂದು ದಿನ ಕೂಡ ಪ್ರಮೋಷನ್ಗೆ ಹೋಗಲು ಬಿಡಲಿಲ್ಲ. ಯಾಕೆ ಆ ನಿರ್ಮಾಪಕರದ್ದು ದುಡ್ಡಲ್ಲವಾ? ಅವರದ್ದು ಸಿನಿಮಾ ಅಲ್ಲವಾ? ಆಗ ಒಂದು ದಿನ ಕಳಿಸಲಿಲ್ಲ ಇವತ್ತು ಪ್ರಮೋಷನ್ಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ ಎಂದರು.
ನಾನು ಈ ಸಿನಿಮಾಗೆ ನನ್ನ ಕಮಿಟ್ಮೆಂಟ್ನಂತೆ ಎಲ್ಲವನ್ನೂ ಮುಗಿಸಿದ್ದೇನೆ. ಇಂದು ನನಗೆ ಬೇರೆ ಕಮಿಟ್ಮೆಂಟ್ ಇದೆ. ಡೇಟ್ಸ್ ಕೊಟ್ಡಿದ್ದೇನೆ, ಅವರಿಗೆ ಲೊಕೇಷನ್ ಪ್ರಾಬ್ಲಂ ಇದೆ ಏನೂ ಮಾಡಲಾಗಲ್ಲ. ಶೂಟಿಂಗ್ಗೆ ಹೋಗಲೇಬೇಕು. ಹಿಂದೆ ಅವರು ನನಗೆ ಏನು ಮಾಡಿದ್ದರೋ ಇಂದು ಅದೇ ಅವರಿಗೆ ಆಗುತ್ತಿದೆ ಅಷ್ಟೆ ಎಂದಿದ್ದಾರೆ.
ನನಗೆ ನಾನು ತಪ್ಪು ಮಾಡಿದ್ದೇನೆ ಎನ್ನಿಸಿಲ್ಲ. ನಾನು ತಪ್ಪು ಮಾಡಿದ್ದರೆ ಚಿಕ್ಕ ಮಕ್ಕಳ ಕಾಲಿಗೂ ಬೀಳುತ್ತೇನೆ. ತಪ್ಪು ಮಾಡಿಲ್ಲ ಎಂದರೆ ದೇವರೇ ಮುಂದೆ ಬಂದು ನಿಂತರೂ ಕ್ಷಮೆ ಕೇಳಲ್ಲ. ಆದರೆ, ಈ ಎಲ್ಲ ಘಟನೆಗಳಿಂದ ನನ್ನ ಅಭಿಮಾನಿಗಳಿಗೆ ಯಾರಿಗಾದರೂ ನೋವಾಗಿದ್ದರೆ ನನ್ನ ಕ್ಷಮೆ ನಿಮಗೆ. ನನ್ನ ಅಭಿಮಾನಿಗಳಿಗೆ ಮಾತ್ರ ಕ್ಷಮೆ ಕೇಳುತ್ತೇನೆ, ಈ ಕ್ಷಮೆ ಬೇರೆಯವರಿಗೆ ಅಲ್ಲ, ನಿಮ್ಮ ಪ್ರೀತಿ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ.
Related Articles
Thank you for your comment. It is awaiting moderation.


Comments (0)