ಇಂದು ರಾತ್ರಿಯಿಂದಲೇ ಬರ್ತಿದ್ದಾನೆ ‘ಕರ್ಣ’; ಧಾರಾವಾಹಿ ಪ್ರಸಾರ ಪ್ರಕಟಿಸಿದ ಜೀ ಕನ್ನಡ
- by Suddi Team
- July 3, 2025
- 42 Views

ಬೆಂಗಳೂರು: ಸಾಕಷ್ಟು ಅಡೆತಡೆಗಳ ನಂತರ ಶೃತಿ ನಾಯ್ಡು ನಿರ್ಮಾಣದ ‘ಕರ್ಣ’ ಧಾರಾವಾಹಿ ಕಡೆಗೂ ಪ್ರೇಕ್ಷಕರ ಮುಂದೆ ಬರುತ್ತಿದೆ. ಅತಿ ಶೀಘ್ರದಲ್ಲಿ ನಿರೀಕ್ಷಿಸಿ ಎನ್ನುವ ಕಾಯುವಿಕೆಗೆ ಜೀ ಕನ್ನಡ ವಾಹಿನಿ ತೆರೆ ಎಳೆದಿದ್ದು, ಇಂದಿನಿಂದಲೇ ಪ್ರತಿ ರಾತ್ರಿ 8 ಗಂಟೆಗೆ ‘ಕರ್ಣ’ ನಿಮ್ಮ ಮುಂದೆ ಬರಲಿದ್ದಾನೆ ಎಂದು ಪ್ರಕಟಿಸಿದೆ.
ಕಿರುತೆರೆಯಲ್ಲಿ ಪ್ರೊಮೋಷನ್ ‘ಸೆನ್ಸೇಷನಲ್ ಹಿಟ್’ ಆದರೂ ಪ್ರಸಾರ ಆರಂಭಕ್ಕೆ ವಿಳಂಬವಾಗಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದ ‘ಕರ್ಣ’ ಧಾರಾವಾಹಿ ಇಂದಿನಿಂದ ಪ್ರಸಾರವಾಗಲಿದೆ ಎಂದು ಜೀ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ಜೂನ್ 16ರಿಂದ ಪ್ರಸಾರವಾಗಬೇಕಿತ್ತಾದರೂ ಕೊನೇ ಕ್ಷಣದಲ್ಲಿ ಪ್ರಸಾರವನ್ನು ರದ್ದು ಮಾಡಲಾಗಿತ್ತು, ಇದಕ್ಕೆ ಪ್ರತಿಸ್ಪರ್ಧಿ ವಾಹನಿಯೊಂದಿಗಿನ ಭವ್ಯಾಗೌಡ ಅವರ ಒಡಂಬಡಿಕೆ ನಿಯಮ ಉಲ್ಲಂಘನೆ ಕಾರಣ ಎನ್ನುವ ಅಂತೆ ಕಂತೆಗಳು ಹರಿದಾಡಿದವು. ಧಾರಾವಾಹಿಯಿಂದ ಭವ್ಯಾಗೌಡ ಅವರಿಗೆ ಕೊಕ್ ನೀಡಲಾಗುತ್ತೆ ಎನ್ನುವ ಚರ್ಚೆಗಳೂ ಸೋಷಿಯಲ್ ಮೀಡಿಯಾದಲ್ಲಿ ನಡೆದವು.
ಆದರೆ, ಅದಕ್ಕೆಲ್ಲಾ ಜೀ ಕನ್ನಡ ವಾಹಿನಿ ತೆರೆ ಎಳೆದಿದೆ. ಇಂದಿನಿಂದ ಪ್ರತಿ ರಾತ್ರಿ 8 ಗಂಟೆಗೆ ಧಾರಾವಾಹಿ ಪ್ರಸಾರವಾಗಲಿದೆ ಎಂದು ಪ್ರಕಟಿಸುವ ಜತೆ ಧಾರಾವಾಹಿ ಪಾತ್ರಗಳಲ್ಲಿ ಯಾವ ಬದಲಾವಣೆಯೂ ಇಲ್ಲ ಎನ್ನುವುದನ್ನು ಖಚಿತಪಡಿಸಲು ಭವ್ಯಾಗೌಡ ಇರುವ ಪ್ರೋಮೋವನ್ನು ಪ್ರಸಾರ ಮಾಡುತ್ತಿದೆ.
ಪ್ರೇಕ್ಷಕರಿಗೆ ಕೊಟ್ಟ ಭರವಸೆ ಈಡೇರಿಸಿದ ಜೀ ವಾಹಿನಿ:
ಕರ್ಣ! ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಅಸೂಯೆ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ, ಎಲ್ಲ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು. ನಿಷ್ಠೆ, ನಿಯತ್ತು, ತ್ಯಾಗ, ಧೈರ್ಯಕ್ಕೆ ಇನ್ನೊಂದು ಹೆಸರು ಅವನು. ಯುಗ ಯುಗಗಳೇ ಕಳೆದರೂ ದಾನಶೂರನಾಗಿ ಎಲ್ಲರ ಮನದಲ್ಲಿ ನೆಲೆಯಾದವನು! ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು. ಆದ್ರೆ, ಬರೋದನ್ನ ತಡೆಯೋದಕ್ಕೆ ಸಾಧ್ಯವೇ ಇಲ್ಲ! ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ, ಅದೇ ಪ್ರೀತಿ – ವಿಶ್ವಾಸದಿಂದ ‘ಕರ್ಣ’ನನ್ನ ಬರಮಾಡಿಕೊಳ್ತೀರಿ ಅಲ್ವಾ?! ಎಂದು ಜೀ ವಾಹಿನಿ ಕರ್ಣನ ಪ್ರಮೋಷನ್ ಮುಂದುವರಿಸಿತ್ತು. ಇದೀಗ ಇಂದಿನಿಂದ ಧಾರಾವಾಹಿ ಪ್ರಸಾರ ಮಾಡುವ ಘೋಷಣೆ ಮೂಲಕ ಎಲ್ಲ ಗೊಂದಲ, ಊಹಾಪೋಹಗಳಿಗೆ ತೆರೆ ಎಳೆದಿದೆ.
ಕಲಾವಿದರು:ಧಾರಾವಾಹಿಯ ನಾಯಕನಾಗಿ ಕಿರಣ್ ರಾಜ್, ನಾಯಕಿಯರಾಗಿ ಭವ್ಯಾ ಗೌಡ ಮತ್ತು ನಮ್ರತಾ ಗೌಡ. ಹಿರಿಯ ನಟ-ನಿರ್ದೇಶಕ ಟಿ.ಎಸ್. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ‘ಒಲವಿನ ನಿಲ್ದಾಣ’ ಸೀರಿಯಲ್ನ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
Related Articles
Thank you for your comment. It is awaiting moderation.
Comments (0)