ಪಾತ್ರ ನಿರ್ವಹಣೆಗೆ ಆಳವಾದ ಅಧ್ಯಯನ ಅಗತ್ಯ ; ‘ಧುರಂಧರ್’ ಬಗ್ಗೆ ನಟ ರಾಕೇಶ್ ಬೇಡಿ
- by Suddi Loka
- November 22, 2026
- 11 Views
ಪಣಜಿ: 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಆದಿತ್ಯ ಧಾರ್ ನಿರ್ದೇಶನದ ಹಿಂದಿ ಚಿತ್ರ ‘ಧುರಂಧರ್’ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ರಾಕೇಶ್ ಬೇಡಿ ಅಭಿನಯದ ಸೂಕ್ಷ್ಮತೆಗಳು, ಪಾತ್ರಗಳ ಸಿದ್ಧತೆ ಮತ್ತು ಸಿನೆಮಾದ ವಿಸ್ತರಿಸುತ್ತಿರುವ ವ್ಯಾಪ್ತಿಯ ಬಗ್ಗೆ ಮಾತನಾಡಿದರು.
‘ಇಂಡಿಯನ್ ಪನೋರಮಾ’ ವಿಭಾಗದ ಮುಖ್ಯವಾಹಿನಿ ಚಲನಚಿತ್ರ ವಿಭಾಗಕ್ಕೆ ಚಾಲನೆ ನೀಡಿದ ಈ ಅಧಿವೇಶನದಲ್ಲಿ ನಟ ರಾಕೇಶ್ ಬೇಡಿ ಮತ್ತು ನಿರ್ಮಾಣ ವಿನ್ಯಾಸಕಿ ಸೈನಿ ಎಸ್. ಜೋಹ್ರೇ ಭಾಗವಹಿಸಿದ್ದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಕುಮಾರ್ ಸಂವಾದ ನಿರ್ವಹಿಸಿದರು.
ಚಿತ್ರದಲ್ಲಿ ‘ಜಮೀಲ್ ಜಮಾಲಿ’ ಪಾತ್ರ ನಿರ್ವಹಿಸಿರುವ ಬೇಡಿ, ಪಾತ್ರದ ಸ್ವರೂಪ ಮತ್ತು ಪ್ರೇರಣೆಗಳನ್ನು ಅರ್ಥಮಾಡಿಕೊಳ್ಳಲು ಆಳವಾದ ಸಂಶೋಧನೆ ಅಗತ್ಯ ಎಂದರು. ರಂಗಭೂಮಿ ಮತ್ತು ಸಿನೆಮಾದಲ್ಲಿ ಐದು ದಶಕಗಳ ಅನುಭವ ಹೊಂದಿರುವ ಅವರು, ಅಭಿನಯವು ಅನುಕರಣೆಗೆ ಸೀಮಿತವಾಗದೆ ಪಾತ್ರದ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದರು.

ಹಾಸ್ಯ ಮತ್ತು ಗಂಭೀರ ದೃಶ್ಯಗಳಲ್ಲಿ ಸಮಯಪ್ರಜ್ಞೆ ಮುಖ್ಯವಾಗಿದ್ದು, ಚಿತ್ರಕಥೆ ಹಾಗೂ ಪಾತ್ರದ ಬೆಳವಣಿಗೆಗೆ ಅನುಗುಣವಾಗಿ ಭಾವನೆ ಮತ್ತು ಅಂಗಚಲನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡುವುದಕ್ಕಿಂತ ಪಾತ್ರದ ಮನಃಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ ಎಂದರು.
ಇದೇ ವೇಳೆ, ಚಿತ್ರದ ನಿರ್ಮಾಣಕ್ಕಾಗಿ 40ಕ್ಕೂ ಹೆಚ್ಚು ಪ್ರಾಯೋಗಿಕ ಸೆಟ್ಗಳನ್ನು ನಿರ್ಮಿಸಿರುವುದಾಗಿ ಸೈನಿ ಎಸ್. ಜೋಹ್ರೇ ತಿಳಿಸಿದರು. ಪಾಕಿಸ್ತಾನದ ಸ್ಥಳಗಳಿಗೆ ಪ್ರವೇಶ ಸಾಧ್ಯವಾಗದ ಹಿನ್ನೆಲೆಯಲ್ಲಿ, ಅಲ್ಲಿನ ಪರಿಸರವನ್ನು ಮರುಸೃಷ್ಟಿಸಲು ಸುದ್ದಿ ದಾಖಲೆಗಳು, ಗ್ಯಾಂಗ್ವಾರ್ ವರದಿಗಳು, ನಗರ ಜೀವನದ ಉಲ್ಲೇಖಗಳು ಮತ್ತು ಗೂಗಲ್ ಮ್ಯಾಪ್ಗಳನ್ನು ಬಳಸಿಕೊಳ್ಳಲಾಯಿತು ಎಂದು ವಿವರಿಸಿದರು.
ಚಲನಚಿತ್ರ ನಿರ್ಮಾಣದ ಹಿಂದಿನ ಸೃಜನಶೀಲ ಪ್ರಕ್ರಿಯೆಗಳನ್ನು ಪರಿಚಯಿಸುವಲ್ಲಿ IFFIಯ ಪಾತ್ರವನ್ನು ಈ ಸಂವಾದ ಎತ್ತಿ ತೋರಿಸಿತು.


Comments (0)