ಬಿಹಾರ ವಿಧಾನಸಭೆಯಲ್ಲಿ ಸಂಚಲನ: ಸ್ವಪಕ್ಷದ ಸಚಿವರಿಗೆ ನೀರಿಳಿಸಿದ ಕಿರಿಯ ಶಾಸಕಿ ಮೈಥಿಲಿ ಠಾಕೂರ್
- by Suddi Team
- February 11, 2026
- 22 Views
ಪಾಟ್ನಾ: ಖ್ಯಾತ ಜಾನಪದ ಗಾಯಕಿ ಹಾಗೂ ಬಿಹಾರದ ಅಲಿನಗರ ಕ್ಷೇತ್ರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರು ಫೆಬ್ರವರಿ 10, 2026ರಂದು ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತಮ್ಮದೇ ಸರ್ಕಾರದ ಸಚಿವರನ್ನು ಪ್ರಶ್ನಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬಿಹಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ತಮ್ಮ ಕ್ಷೇತ್ರದ ತಾರ್ಡಿಹ್ ಬ್ಲಾಕ್ನ ಕುರಸೋನ್ ನಡಿಯಾಮಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಶಿಥಿಲಾವಸ್ಥೆಯ ಕುರಿತು ಶಾಸಕಿ ಮೈಥಿಲಿ ಠಾಕೂರ್ ಪ್ರಶ್ನೆ ಎತ್ತಿದ್ದರು. ಈ ವೇಳೆ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ನೀಡಿದ ಲಿಖಿತ ಉತ್ತರದಿಂದ ಅತೃಪ್ತಗೊಂಡ ಅವರು, ಸದನದಲ್ಲೇ ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ವಾಸ್ತವದ ಸವಾಲು: “ಸರ್ಕಾರಿ ದಾಖಲೆಗಳಲ್ಲಿ ಆಸ್ಪತ್ರೆಯ ಕಟ್ಟಡ ಸುಸ್ಥಿತಿಯಲ್ಲಿದೆ ಮತ್ತು ಕೇವಲ ದುರಸ್ತಿಯ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವಂತಿದೆ” ಎಂದು ಮೈಥಿಲಿ ಗುಡುಗಿದರು.
ವೈದ್ಯರ ಕೊರತೆ: ಆಸ್ಪತ್ರೆಯ ವ್ಯವಸ್ಥೆ ಕೇವಲ ಒಂದು ಸಣ್ಣ ಕೊಠಡಿಯಲ್ಲಿ ನಡೆಯುತ್ತಿದೆ. ಈ ಹಿಂದೆ ಇಬ್ಬರು ಎಂಬಿಬಿಎಸ್ ವೈದ್ಯರಿದ್ದಲ್ಲಿ ಈಗ ಕೇವಲ ಆಯುಷ್ ವೈದ್ಯರು ಮಾತ್ರ ಇದ್ದಾರೆ. ಕೂಡಲೇ ಕನಿಷ್ಠ ಇಬ್ಬರು ಎಂಬಿಬಿಎಸ್ ವೈದ್ಯರನ್ನು ನೇಮಿಸುವಂತೆ ಅವರು ಆಗ್ರಹಿಸಿದರು.
ಜನರ ಹಿತವೇ ಮುಖ್ಯ: “ನಾನು ಸಚಿವರಿಗೆ ಸವಾಲು ಹಾಕುತ್ತಿಲ್ಲ, ಬದಲಾಗಿ ಮನವಿ ಮಾಡುತ್ತಿದ್ದೇನೆ. ಆರೋಗ್ಯ ಸಚಿವರು ನಾನು ಚಿಕ್ಕಂದಿನಿಂದಲೂ ಈ ಇಲಾಖೆಯನ್ನು ಮುನ್ನಡೆಸುತ್ತಿರುವುದನ್ನು ನೋಡುತ್ತಿದ್ದೇನೆ. ಹೀಗಾಗಿ ಈ ಕುರಿತು ಅವರು ವೈಯಕ್ತಿಕ ಗಮನ ಹರಿಸಬೇಕು” ಎಂದು ಶಾಸಕಿ ವಿನಂತಿಸಿದರು.
ವಿಪಕ್ಷಗಳ ಬೆಂಬಲ: ಕಿರಿಯ ಶಾಸಕಿಯ ಈ ದಿಟ್ಟತನಕ್ಕೆ ಸದನದಲ್ಲಿದ್ದ ವಿರೋಧ ಪಕ್ಷದ ಸದಸ್ಯರು ಮೇಜು ತಟ್ಟಿ ಬೆಂಬಲ ಸೂಚಿಸಿದರು.
ಕಿರಿಯ ಶಾಸಕಿ:
ಕೇವಲ 25 ವರ್ಷದ ಮೈಥಿಲಿ ಠಾಕೂರ್ ಅವರು ಪ್ರಸ್ತುತ ಬಿಹಾರದ ಹಾಗೂ ದೇಶದ ಅತ್ಯಂತ ಕಿರಿಯ ಶಾಸಕಿ (Gen Z MLA) ಎನಿಸಿಕೊಂಡಿದ್ದಾರೆ. ನವೆಂಬರ್ 2025ರಲ್ಲಿ ನಡೆದ ಚುನಾವಣೆಯಲ್ಲಿ ಆರ್ಜೆಡಿ ನಾಯಕ ವಿನೋದ್ ಮಿಶ್ರಾ ಅವರನ್ನು ಸೋಲಿಸಿ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
Related Articles
Thank you for your comment. It is awaiting moderation.


Comments (0)