ಕಾಲ್ತುಳಿತ ಪ್ರಕರಣ:ನ್ಯಾಯಾಂಗ ತನಿಖೆಗೆ ವಿಜಯೇಂದ್ರ ಆಗ್ರಹ
- by Suddi Team
- June 4, 2025
- 12 Views

ಬೆಂಗಳೂರು: ಆರ್.ಸಿ.ಬಿ. ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ ಇಂದು ನಡೆದ ಕಾಲ್ತುಳಿತ ಮತ್ತು ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೂರ್ವತಯಾರಿ ಇಲ್ಲದೇ ಹುಡುಗಾಟಿಕೆ ಮಾಡಿದ್ದರ ಪರಿಣಾಮವಾಗಿ 11ಕ್ಕೂ ಹೆಚ್ಚು ಜನರು ಪ್ರಾಣ ಕಳಕೊಂಡಿದ್ದಾರೆ. ನೂರಾರು ಜನರು ಆಸ್ಪತ್ರೆ ಸೇರಿದ್ದಾರೆ; ಇನ್ನೂ ಎಷ್ಟು ಸಾವಾಗಲಿದೆಯೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಇದೆಲ್ಲಕ್ಕೂ ರಾಜ್ಯ ಸರಕಾರವೇ ಹೊಣೆ ಎಂದು ತಿಳಿಸಿದರು.
ಪ್ರಶ್ನೆಗೆ ಉತ್ತರ ನೀಡಿದ ಅವರು, ಲಭ್ಯ ಮಾಹಿತಿ ಪ್ರಕಾರ 12 ಜನರು ಈಗಾಗಲೇ ಪ್ರಾಣ ಕಳಕೊಂಡಿದ್ದಾರೆ. ಸ್ಟೇಡಿಯಂನಲ್ಲಿ ಪರದಾಟ ಮುಂದುವರೆದಿದೆ. ಅದರ ನಡುವೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಆಕ್ಷೇಪಿಸಿದರು. ಪೂರ್ವತಯಾರಿ ಇಲ್ಲದೆ ಹೀಗಾಗಿದೆ. ಇದೆಲ್ಲದಕ್ಕೂ ರಾಜ್ಯ ಸರಕಾರವೇ ಹೊಣೆ ಎಂದು ಆರೋಪಿಸಿದರು. ಆತುರಾತುರವಾಗಿ ಇವತ್ತೇ ಈ ಕಾರ್ಯಕ್ರಮ ಆಯೋಜಿಸಬೇಕಿತ್ತೇ ಎಂದು ಅವರು ಇನ್ನೊಂದು ಪ್ರಶ್ನೆಗೆ ಮರುಪ್ರಶ್ನೆ ಹಾಕಿದರು.
ನಿನ್ನೆ ಆರ್.ಸಿ.ಬಿ. ಫೈನಲ್ಸ್ನಲ್ಲಿ ಗೆದ್ದಾಗ ದೇಶದಲ್ಲಿ ಸಂಭ್ರಮಾಚರಣೆ ನಡೆಸಲಾಗಿತ್ತು. ರಾಜ್ಯದಲ್ಲೂ ಲಕ್ಷೋಪಲಕ್ಷ ಜನರು ಸಂಭ್ರಮಿಸಿದ್ದಾರೆ. ಆದರೆ, ಇಂಥ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ರಾಜ್ಯ ಸರಕಾರ ಸ್ವಲ್ಪ ವಿವೇಚನೆಯಿಂದ ನಡೆದುಕೊಳ್ಳಬೇಕಿತ್ತು ಎಂದು ತಿಳಿಸಿದರು.
ಬೆಂಗಳೂರು ಸೂತಕದ ಮನೆ:
ದೇಶವು ಸಂಭ್ರಮ ಆಚರಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರು ಸೂತಕದ ಮನೆ ಆಗಿದೆ ಎಂದು ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ಹೆಣ್ಮಕ್ಕಳು ಬ್ಯಾರಿಕೇಡ್ ಬಳಿ ಪರದಾಡುತ್ತಿದ್ದರು. ವಿರಾಟ್ ಕೊಹ್ಲಿ ಕೂಡ ಬೇಸರದಿಂದ ಬಸ್ ಹತ್ತಿ ಹೊರಟಿದ್ದರು. ರಾಜಕಾರಣಿಗಳು, ಮುಖ್ಯಮಂತ್ರಿಗಳು, ಅಧಿಕಾರಿಗಳ ಮಕ್ಕಳು ಆಟೋಗ್ರಾಫ್ ಪಡೆಯಲು ಹೋಗಿದ್ದರು ಎಂದು ಗಮನ ಸೆಳೆದರು.
ಯಾವುದೇ ಪೂರ್ವತಯಾರಿ ಇಲ್ಲದೇ, ರಾಜ್ಯ ಸರಕಾರವು ಏಕಾಏಕಿಯಾಗಿ ಸಂಭ್ರಮಾಚರಣೆ ಆಯೋಜಿಸಬೇಕಿತ್ತೇ ಎಂದು ಅವರು ಪ್ರಶ್ನಿಸಿದರು. ವಿಧಾನಸೌಧದ ಮುಂದೆ ಸಂಭ್ರಮಾಚರಣೆಗೆ ಪೊಲೀಸರು ಅನುಮತಿಯನ್ನೂ ಕೊಟ್ಟಿರಲಿಲ್ಲ ಎಂದು ಗಮನ ಸೆಳೆದರು. ವಿಧಾನಸೌಧದ ಮುಂದೆ ಸಂಭ್ರಮಾಚರಣೆ ಬೇಡ; ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದೆಂದು ಪೊಲೀಸ್ ಹಿರಿಯ ಅಧಿಕಾರಿಗಳು ಹೇಳಿದರೂ, ಮುಖ್ಯಮಂತ್ರಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯ ಮಾಡಿ ಆಗಲೇಬೇಕೆಂದು ಆದೇಶಿಸಿದ್ದಾರೆ. ಬಳಿಕ ವಿಧಾನಸೌಧದ ಮುಂದೆ ಸಂಭ್ರಮಾಚರಣೆ ನಡೆದಿದೆ ಎಂದು ಆಕ್ಷೇಪಿಸಿದರು.
ಕಾಲ್ತುಳಿತದ ಅನಾಹುತ, ಸಾವುಗಳಿಗೆ ಯಾರು ಹೊಣೆ ಎಂದು ಮುಖ್ಯಮಂತ್ರಿಗಳು ನಿರ್ಧರಿಸಲಿ ಎಂದು ಒತ್ತಾಯಿಸಿದರು. ರಾಜ್ಯ ಸರಕಾರ ಬೇಜವಾಬ್ದಾರಿಯಿಂಡ ನಡೆದುಕೊಂಡಿದ್ದು, ಪ್ರಚಾರದ ಹುಚ್ಚಿನ ಪರಿಣಾಮವಾಗಿ ಇದೆಲ್ಲ ನಡೆದಿದೆ ಎಂದು ಆರೋಪಿಸಿದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಯಾವುದೇ ರೀತಿಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಕೆಳಗೆ ಬಿದ್ದ ಹೆಣ್ಮಕ್ಕಳನ್ನು ಎತ್ತುವವರೂ ಇರಲಿಲ್ಲ ಎಂದು ಕೆಲವು ಹೆಣ್ಮಕ್ಕಳು ಹೇಳಿದ್ದಾಗಿ ವಿವರಿಸಿದರು. ಸ್ವಯಂಸೇವಕರು, ಪೊಲೀಸ್ ವ್ಯವಸ್ಥೆ ಇರಲಿಲ್ಲ. ಆಂಬುಲೆನ್ಸ್ ವ್ಯವಸ್ಥೆಯೂ ಇರಲಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವುದು ಸರಕಾರಕ್ಕೆ ಗೊತ್ತಿರಲಿಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಚಿನ್ನಸ್ವಾಮಿ ಸ್ಟೇಡಿಯಂ ಸಾಮಥ್ರ್ಯ ಇವರಿಗೆ ಗೊತ್ತಿಲ್ಲವೇ ಎಂದು ಕೇಳಿದರು.
ಎರಡು ಆಸ್ಪತ್ರೆಗಳಿಗೆ ಭೇಟಿ:
ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪಿ.ರಾಜೀವ್, ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಕಾಲ್ತುಳಿತಕ್ಕೆ ಸಿಲುಕಿ ಚಿಕಿತ್ಸೆ ಪಡೆಯುತ್ತಿರುವವರನ್ನು ದಾಖಲಿಸಿದ ವೈದೇಹಿ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೆ, ದುರಂತಕ್ಕೆ ಸಿಲುಕಿದ ಕುಟುಂಬದವರಿಗೆ ಸಾಂತ್ವನ ಹೇಳಿದರು.
Related Articles
Thank you for your comment. It is awaiting moderation.
Comments (0)