ಬೆಂಗಳೂರಿನಲ್ಲಿ ಶಾಶ್ವತ ಮಳೆನೀರುಗಾಲುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ – ಡಿ.ಕೆ. ಶಿವಕುಮಾರ್
- by Suddi Team
- May 19, 2025
- 21 Views

ಹೊಸಪೇಟೆ: ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗುವ ಅವಾಂತರಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಶ್ವತ ಮಳೆನೀರುಗಾಲುವೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ನಡೆಯಲಿರುವ ಸಾಧನಾ ಸಮಾವೇಶದ ಪೂರ್ವಸಿದ್ಧತೆ ಪರಿಶೀಲಿಸಿದ ಬಳಿಕ ಮಳೆ ಅವಾಂತರ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದರು.
ಬೆಂಗಳೂರು ಮಳೆ ಅವಾಂತರಕ್ಕೆ ಶಾಶ್ವತ ಪರಿಹಾರವೇ ಇಲ್ಲವೇ ಎಂದು ಕೇಳಿದಾಗ, ಮಳೆ ಪ್ರಕೃತಿ. ಅದು ಯಾರ ನಿಯಂತ್ರಣದಲ್ಲೂ ಇಲ್ಲ. ಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ನಮ್ಮ ಅಧಿಕಾರಿಗಳು ನಾಲ್ಕು ದಿನಗಳಿಂದಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಮಳೆ ನೀರುಗಾಲುವೆಯನ್ನು ಶಾಶ್ವತವಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ವಿಶ್ವಬ್ಯಾಂಕ್‌ನಿಂದ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯಿಂದ 2 ಸಾವಿರ ಕೋಟಿ ರೂ. ನೆರವು ಪಡೆಯಲಾಗಿದೆ ಎಂದು ತಿಳಿಸಿದರು.
ಪರಿಸ್ಥಿತಿಯ ಸಮರ್ಥ ನಿರ್ವಹಣೆ:
ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದೆ ಎಂದು ಕೇಳಿದಾಗ, ಮಳೆ ಬರಬೇಕು. ಹೆಚ್ಚು ಮಳೆ ಬಂದಷ್ಟೂ ಸರ್ಕಾರಕ್ಕೆ ಲಾಭ. ಭಾನುವಾರ ರಾತ್ರಿ ಸುರಿದ ಮಳೆಯಿಂದ ಗೋಡೆ ಕುಸಿದು ಒಂದು ಸಾವಾಗಿದೆ ಎಂದು ಮಾಹಿತಿ ಬಂದಿದೆ. ಉಳಿದಂತೆ ಯಾವುದೇ ಅವಘಡ ಸಂಭವಿಸಿಲ್ಲ. ನಮ್ಮ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಕೆಲ ತಗ್ಗು ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವ ಜಾಗದಲ್ಲಿ ನೀರು ನುಗ್ಗಿದೆ. ಮಳೆ ಹಾನಿ ಪ್ರದೇಶಕ್ಕೆ ನಾನು, ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅವರ ಟೀಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಾನು ಇಲ್ಲಿಗೆ ಪ್ರವಾಸ ಮಾಡುವುದಕ್ಕೆ ಬಂದಿದ್ದೇನೆಯೇ? ಜನರ ಬದುಕು ಸರಿ ಮಾಡುವ ಉದ್ದೇಶದೊಂದಿಗೆ ಬಂದಿದ್ದೇನೆ. ಅವರು ವಿರೋಧ ಪಕ್ಷದಲ್ಲಿದ್ದಾರೆ ಅವರಿಗೆ ಮತ್ತು ಆರ್. ಅಶೋಕ್ ಅವರಿಗೆ ಸರ್ಕಾರದ ವಿರುದ್ಧ ಟೀಕೆ ಮಾಡದಿದ್ದರೆ ಸಮಾಧಾನವೇ ಆಗುವುದಿಲ್ಲ. ಅವರ ಸ್ಥಾನಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ನಾಲ್ಕು ಮಾತು ಆಡಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ಅವರು ದೇಶದ ನಂಬರ್ 1 ಶ್ರೀಮಂತರಾಗಲು ಗ್ರೇಟರ್ ಬೆಂಗಳೂರು ಜಾರಿ ಮಾಡಿದ್ದಾರೆ ಎಂಬ ಶ್ರೀರಾಮುಲು ಅವರ ಟೀಕೆ ಬಗ್ಗೆ ಕೇಳಿದಾಗ, ಅವರ ಆಶೀರ್ವಾದ ನನ್ನ ಮೇಲಿರಲಿ. ಶ್ರೀರಾಮುಲು ಅವರಿಗಾಗಲಿ, ಅಶೋಕ್ ಅವರಿಗಾಗಲಿ ನಾನು ಈಗ ಇಲ್ಲಿ ಉತ್ತರ ನೀಡುವುದಿಲ್ಲ. ಬಿಜೆಪಿ ಹಾಗೂ ವಿರೋಧ ಪಕ್ಷದವರು ಹೊಸಪೇಟೆಯಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ನೀಡುತ್ತಿರುವ ಭೂ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ:
ಗ್ಯಾರಂಟಿಗಳಿಂದ ಅಭಿವೃದ್ಧಿಯಾಗುತ್ತಿಲ್ಲ ಎಂದು ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ನಮ್ಮದು ಕಾಂಗ್ರೆಸ್ ಗ್ಯಾರಂಟಿ. ಅವರದು ಮೋದಿ ಗ್ಯಾರಂಟಿ ಎಂದರು. ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಅವರು ಏನು ಮಾಡಿದ್ದಾರೆ? ನಮ್ಮ ಯೋಜನೆ ನಕಲು ಮಾಡಿದರು. ಇಡೀ ದೇಶಕ್ಕೆ ಕಾಂಗ್ರೆಸ್ ಆಡಳಿತ ಮಾದರಿಯಾಗಿದೆ. ಬಿಜೆಪಿಯವರು ನರೇಗಾ ಯೋಜನೆ ಬಗ್ಗೆ ಅನೇಕ ಟೀಕೆ ಮಾಡಿದರು. ಆದರೂ ನರೇಗಾ ಯೋಜನೆ ತೆಗೆಯಲು ಸಾಧ್ಯವಾಯಿತೇ? ನಾವು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದೆವು, ಅದನ್ನು ಬಿಜೆಪಿಯವರಿಂದ ತೆಗೆದು ಹಾಕಲು ಸಾಧ್ಯವಾಯಿತೇ? ಯುಪಿಎ ಸರ್ಕಾರದಲ್ಲಿ ಬುಡಕಟ್ಟು ಜನರಿಗೆ ಭೂಮಿ ಕೊಟ್ಟೆವು. ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದೆವು, ಶೈಕ್ಷಣಿಕ ಹಕ್ಕು ಕಾಂಗ್ರೆಸ್ ಜಾರಿಗೆ ತಂದಿತು. ಬಿಜೆಪಿ ಇಂತಹ ಯೋಜನೆ ಜಾರಿ ಮಾಡಿದೆಯೇ? ಇಲ್ಲ. ಅವರು ಕೇವಲ ಟೀಕೆ ಮಾಡುತ್ತಾರೆ. ಟೀಕೆ ಮಾಡುವವರನ್ನು ತಡೆಯಲಾಗದು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದರು.
Related Articles
Thank you for your comment. It is awaiting moderation.
Comments (0)