ಲೋಕಸಭಾ ಸ್ಥಾನಗಳ ಹೆಚ್ಚಳಕ್ಕೆ ಸಿಎಂ ನಾಯ್ಡು ಬೆಂಬಲ! ದಕ್ಷಿಣದ ಪ್ರಾತಿನಿಧ್ಯ ಶೇ.23.76ರಷ್ಟು ಮುಂದುವರಿಕೆ ಎಂದ ಆಂಧ್ರ ಸಿಎಂ
- by Suddi Loka
- November 28, 2026
- 10 Views
ನವದೆಹಲಿ: ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಸ್ವಾಗತಿಸಿರುವ ಅವರು, ಇದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವದಡಿ ಕೈಗೊಂಡ ಐತಿಹಾಸಿಕ ಕ್ರಮ ಎಂದು ಬಣ್ಣಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಆತಂಕವಿತ್ತು. ಆದರೆ, ಪ್ರತಿ ರಾಜ್ಯದ ಹಾಲಿ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವುದರಿಂದ ಈ ಸಮಸ್ಯೆ ಪರಿಹಾರವಾಗಲಿದೆ ಎಂದರು.

ದಕ್ಷಿಣ ಭಾರತದ ಪ್ರಸ್ತುತ ಶೇ.23.76ರಷ್ಟು ಸಂಸದೀಯ ಪ್ರಾತಿನಿಧ್ಯ ಮುಂದುವರಿಯಲಿದೆ ಎಂದು ತಿಳಿಸಿದ ಅವರು, ಆಂಧ್ರಪ್ರದೇಶದ ಸ್ಥಾನಗಳು 25ರಿಂದ 38ಕ್ಕೆ, ತಮಿಳುನಾಡಿನದ್ದು 39ರಿಂದ 59ಕ್ಕೆ, ಕರ್ನಾಟಕದ್ದು 28ರಿಂದ 42ಕ್ಕೆ, ತೆಲಂಗಾಣದ್ದು 17ರಿಂದ 26ಕ್ಕೆ ಹಾಗೂ ಕೇರಳದ್ದು 20ರಿಂದ 30ಕ್ಕೆ ಏರಿಕೆಯಾಗಲಿವೆ ಎಂದು ವಿವರಿಸಿದರು. ಒಟ್ಟಾರೆ ದಕ್ಷಿಣ ಭಾರತದ ಸ್ಥಾನಗಳು 129ರಿಂದ 195ಕ್ಕೆ ಹೆಚ್ಚಾಗಲಿವೆ ಎಂದರು.
ಈ ಪ್ರಸ್ತಾವನೆ ಎಲ್ಲರಿಗೂ ತೃಪ್ತಿ ನೀಡುವಂತಹದ್ದು. ಎಲ್ಲರೂ ಒಮ್ಮತಕ್ಕೆ ಬರಬೇಕು ಎಂದು ನಾಯ್ಡು ಕರೆ ನೀಡಿದರು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಅಗತ್ಯ ಎಂದ ಅವರು, ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು.
ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದ್ದು, ನವೆಂಬರ್ 29ರಿಂದಲೇ ಟಿಡಿಪಿ, ಜನಸೇನೆ ಮತ್ತು ಬಿಜೆಪಿ ಸಂಸದರು ದೆಹಲಿಯಲ್ಲಿ ಹಾಜರಿರುವಂತೆ ನಾಯ್ಡು ಸೂಚಿಸಿದ್ದಾರೆ.


Comments (0)